ವಾಯುಮಾಲಿನ್ಯ ಹೆಚ್ಚಳ ; ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿದ ದೆಹಲಿ ಸರ್ಕಾರ…

71
firstsuddi

ನವದೆಹಲಿ : ವಾಯು ಮಾಲಿನ್ಯ ಹೆಚ್ಚಳ ಹಿನ್ನಲೆ ಮುಂದಿನ ಆದೇಶದವರೆಗೆ ದೆಹಲಿಯ ಶಾಲೆಗಳನ್ನು ನಾಳೆಯಿಂದ ಮುಚ್ಚಲಾಗುವುದು ಎಂದು ರಾಜ್ಯ ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ. ವಾಯುಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ 24ಗಂಟೆಗಳ ಡೆಡ್ ಲೈನ್ ಕೊಟ್ಟು ಸುಪ್ರೀಂಕೋರ್ಟ್ ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ತೀರ್ಮಾನ ಬಂದಿದೆ.

ಮಾಲಿನ್ಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಯು ಗುಣಮಟ್ಟ ಸುಧಾರಿಸುವ ಮುನ್ಸೂಚನೆಯನ್ನು ಪರಿಗಣಿಸಿ ನಾವು ಶಾಲೆಗಳನ್ನು ಪುನರಾರಂಭಿಸಿದ್ದೇವೆ. ಆದಾಗ್ಯೂ, ವಾಯು ಮಾಲಿನ್ಯದ ಮಟ್ಟವು ಮತ್ತೆ ಹೆಚ್ಚಾಗಿದೆ ಮತ್ತು ಮುಂದಿನ ಆದೇಶದವರೆಗೆ ನಾವು ನಾಳೆಯಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಪಿಐಎಲ್ ಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ಇಂದು ಕೂಡ ದೆಹಲಿ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇಂದಿನ ವಿಚಾರಣೆ ವೇಳೆ ಎನ್.ವಿ.ರಮಣ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ನಾಳೆಯೊಳಗೆ ಕಠಿಣ ಕ್ರಮ ವಹಿಸಬೇಕು. ನಾವು ನಿಮಗೆ 24 ಗಂಟೆಗಳ ಗಡುವು ಕೊಡುತ್ತಿದ್ದೇವೆ. ಅದಾಗದೆ ಇದ್ದರೆ, ಮುಂದಿನ ಆದೇಶ ನಾವೇ ಹೊರಡಿಸಬೇಕಾಗುತ್ತದೆ ಎಂದು ಖಡಕ್ ಆಗಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.