ವಿಜಯಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ಭೂಕಂಪನದ ಅನುಭವವಾಗಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ 9:55ಕ್ಕೆ 2.4 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.
ಮನಗೂಳಿ ಪಟ್ಟಣದಿಂದ 2.9 ಕಿ.ಮೀ ದೂರದಲ್ಲಿ ಭೂಕಂಪವಾಗಿದೆ. ಭೂಕಂಪನದ ‘ಸೆಸ್ಮಿಕ್ ಇಂಟೆನ್ಸಿಟಿ ಮ್ಯಾಪ್’ ಪ್ರಕಾರ, ತೀವ್ರತೆಯು ತುಂಬಾ ಕಡಿಮೆ ಇದೆ. ಭೂಮಿಯ 15 ರಿಂದ 20 ಕಿಮೀ ಆಳದಲ್ಲಿ ಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಈ ರೀತಿಯ ಭೂಕಂಪವು ಜನರಿಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಏಕೆಂದರೆ ತೀವ್ರತೆಯು ತುಂಬಾ ಕಡಿಮೆಯಾಗಿದೆ. ಪ್ರಮಾಣ ಮತ್ತು ತೀವ್ರತೆ ಕಡಿಮೆ ಇರುವುದರಿಂದ ಸಮುದಾಯ ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.










