ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘಗಳು ಸಹಕಾರಿ ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಹೇಳಿದರು.
ನಗರದ ಮಲೆನಾಡು ವಿದ್ಯಾ ಸಂಸ್ಥೆಯ ಪರ್ವತವರ್ಧನ ಎಂ.ಎಲ್.ವಾಸುದೇವಮೂರ್ತಿ ಪ್ರೌಢಶಾಲೆಯಲ್ಲಿ ಇಂದು ವಿವಿಧ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ನಾಯಕರಾಗಲು ವಿದ್ಯಾರ್ಥಿ ಸಂಘಗಳು ಮೊದಲ ಮೆಟ್ಟಿಲು ಅವುಗಳ ಮೂಲಕ ಮಕ್ಕಳು ಶಿಸ್ತು, ಸಮಯಪ್ರಜ್ಞೆ, ಬುದ್ಧಿವಂತಿಕೆಯನ್ನು ಬೆಳೆಸಿಕೊಂಡು ನಾಯಕರಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಬಿ.ಎಂ. ಲೋಕೇಶ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳಿಗೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಜಯಶ್ರೀ ಜೋಶಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಪ್ರೋತ್ಸಾಹ ಧನ ನೀಡಲಾಯಿತು. ಇದೇ ವೇಳೆ ಶಾಲೆಯಲ್ಲಿ ಭಾರತ ಸೇವಾದಳದ ಘಟಕವನ್ನು ಉದ್ಘಾಟಿಸಲಾಯಿತು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ, ಮಲೆನಾಡು ವಿದ್ಯಾಸಂಸ್ಥೆಯ ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮಿ, ಶಿಕ್ಷಕರಾದ ಎನ್.ರೂಪ, ಹೆಚ್.ಎನ್.ಸತೀಶ್, ಹೆಚ್.ಡಿ.ಮಹೇಂದ್ರಕುಮಾರ್ ಉಪಸ್ಥಿತರಿದ್ದರು.










