ಚಿಕ್ಕಮಗಳೂರು : ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದರ ಜೊತೆಗೆ ಸಾರ್ವಜನಿಕ ಸಂಪರ್ಕ ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜವನ್ನು ಎದುರಿಸುವ ರೀತಿ ನೀತಿಯ ಬಗ್ಗೆ ಹೆಚ್ಚು ಜಾಗೃತಗೊಳ್ಳಲು ಸಾಧ್ಯ ಎಂದು ಪೌಷ್ಠಿಕ ಆಹಾರ ತಜ್ಞೆ ಹಾಗೂ ನಟಿ ಶರ್ಮಿತಾ ರವರು ಅಭಿಪ್ರಾಯಿಸಿದರು.
ಟೌನ್ ಮಹಿಳಾ ಸಮಾಜದ ಜ್ಞಾನ ಜ್ಯೋತಿ ಟಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆವರಣದ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಪೌಷ್ಠಿಕ ಆಹಾರ ಸೇವೆನೆಯಿಂದ ಹಲವಾರು ರೋಗಗಳಿಂದ ದೂರ ಉಳಿಯಬಹುದು. ಅದೇ ರೀತಿ ಪೌಷ್ಠಿಕ ಆಹಾರ ಮೇಳದ ಮೂಲಕ ಆಹಾರ ಸೇವೆನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜಕ್ಕೆ ನಾವು ಮಾದರಿಯಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಇರಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ. ಅಲ್ಲದೇ ಪೌಷ್ಠಿಕ ಯುಕ್ತ ಆಹಾರವನ್ನು ಸೇವಿಸುವ ಮೂಲಕ ಹೆಚ್ಚು ಆರೋಗ್ಯ ವಂತರಾಗಲು ವಿದ್ಯಾರ್ಥಿಗಳು ಗಮನಹರಿಸಬೇಕೆಂದರು.
ಆಹಾರ ಮೇಳದ ಮೂಲಕ ವಿದ್ಯಾರ್ಥಿಗಳು ಹೊಸತನವನ್ನು ಕಂಡುಹಿಡಿಯುವ ರೂಪುರೇಷೆಗಳನ್ನು ತಯಾರಿಸಿಕೊಳ್ಳುವತ್ತ ಗಮನಹರಿಸಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಎಂ.ಬಿ.ಕಟಗಿ, ಆಹಾರದ ಮೇಳದಿಂದ ಗುರು ಮತ್ತು ವ್ಯವಹಾರ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಹಾರ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ರೂಗ ರುಜಿನಗಳು ಬಹುತೇಕ ತಡೆಗಟ್ಟಲು ಸಾಧ್ಯ ಎಂದರು.
ಆಹಾರ ಮೇಳದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ಗೀತಾ ಎಂ.ಎಲ್.ಮೂರ್ತಿ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹಾಗೂ ಪೌಷ್ಠಿಕ ಯುಕ್ತ ಆಹಾರದ ಬಗ್ಗೆ ಹೆಚ್ಚು ಜಾಗೃತಿಗೊಂಡರೆ ವಿದ್ಯಾರ್ಥಿಗಳು ಹೆಚ್ಚು ದೈಹಿಕ ಆರೋಗ್ಯ ಹೊಂದುತ್ತಾರೆ. ಉತ್ತಮ ಆರೋಗ್ಯ ಹೊಂದಿರುವ ದೇಹದಲ್ಲಿ ಉತ್ತಮ ಮಾನಸಿಕ ಸದೃಢತೆಯೂ ಇರುತ್ತದೆ ಎಂದು ಹೇಳಿದರು.
ಆಹಾರ ಸುರಕ್ಷತಾ ಅಧಿಕಾರಿ ಸುರೇಶ್ ಕೆ.ಕೆ. ಮಾತನಾಡಿ, ಆಹಾರ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಜಾರಿ ಇರುವ ಕಾನೂನುಗಳ ಬಗ್ಗೆ ತಿಳಿಸಿ, ಐಎಸ್ಐ ನೋಂದಣಿ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾಲೇಜು ಆಡಳಿತ ಮಂಡಳಿ ನಿದೇರ್ಶಕರುಗಳಾದ ಸುಧಾ,ಶಿಕ್ಷಕ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು. ಕುಮಾರಿ ಯಶಸ್ವಿನಿ ಸಿ.ಪಿ ಸ್ವಾಗತಿಸಿ,ಬಿಂದುಶ್ರೀ ಅರಸ್ ಹಾಗೂ ಚಂದು ಗೌಡ ವಂದಿಸಿದರು.










