ವಿದ್ಯಾವಂತ ಯುವಜನತೆ ಹೆತ್ತವರು ಮತ್ತು ಗುರುಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು – ಎ.ಉಲ್ಲಾಸ್ ಕುಮಾರ್

507
firstsuddi

ಚಿಕ್ಕಮಗಳೂರು – ವಿದ್ಯಾವಂತ ಯುವಜನತೆ ಹೆತ್ತವರು ಮತ್ತು ಗುರುಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಕೆನರಾ ಬ್ಯಾಂಕ್‍ನ ಸಹಾಯಕ ಮಹಾಪ್ರಬಂಧಕ ಸಲಹೆ ಮಾಡಿದರು.
ಬ್ರಾಹ್ಮಣ ಮಹಾಸಭಾ ನಗರದ ಬ್ರಹ್ಮಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಮಾಸಾಶನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪ್ರತಿಭಾವಂತನ ಹಿಂದೆ ಆತನ ತಂದೆ ತಾಯಿ, ಗುರು ಸೇರಿದಂತೆ ಅನೇಕರ ತ್ಯಾಗ ಮತ್ತು ಶ್ರಮವಿರುತ್ತದೆ ಅವರೆಲ್ಲರ ಪರಿಶ್ರಮದಿಂದ ಆ ವ್ಯಕ್ತಿ ದೊಡ್ಡಮನುಷ್ಯನಾಗಿ ಬೆಳೆಯುತ್ತಾನೆ, ಹೆತ್ತವರು ತಮ್ಮ ಮಕ್ಕಳಿಂದ ಏನನ್ನೂ ಅಪೇಕ್ಷಿಸುವುದಿಲ್ಲ ಅವರು ಚೆನ್ನಾಗಿದ್ದರೆ ಸಾಕು ಎಂದು ಮಾತ್ರ ಬಯಸುತ್ತಾರೆ, ಆದರೆ ವಿದ್ಯಾವಂತ ಯುವಜನತೆ ಮಾತ್ರ ಏರಿದ ಏಣಿಯನ್ನು ಒದೆಯುವ ಕೆಲಸ ಮಾಡಬಾರದು ತಮ್ಮ ಬೆಳವಣಿಗೆಗೆ ಕಾರಣರಾದವರಿಗೆ ಚಿರಋಣಿಗಳಾಗಿರಬೇಕು ಎಂದು ಕಿವಿಮಾತು ಹೇಳಿದರು.
ಬೇರೆ ಜಾತಿ ಮತ್ತು ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೇರಿದಂತೆ ಸರ್ಕಾರದ ಅನೇಕ ಸವಲತ್ತುಗಳಿವೆ ಆದರೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅದ್ಯಾವುದೂ ಇಲ್ಲ ಅವರಿಗೆ ಗಾಡ್‍ಫಾದರ್ ಇಲ್ಲ ಎಂದ ಅವರು ಹಾಗಂತ ವಿಪ್ರ ವಿದ್ಯಾರ್ಥಿಗಳು ಸುಮ್ಮನಿರಬಾರದು ಗಾಡ್ ಅನ್ನೇ ಫಾದರ್ ಆಗಿ ಮಾಡಿಕೊಂಡು ಬೆಳೆಯಬೇಕು ಎಂದರು.
ದಿವಿಜ ಸೌಹಾರ್ದ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಿ.ಹೆಚ್.ನಟರಾಜ್ ಮಾತನಾಡಿ ವಿದ್ಯಾವಂತ ಯುವ ಜನತೆ ಹೆತ್ತವರು ಮತ್ತು ಗುರುಹಿರಿಯರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಎ.ವಿ.ಅನಂತರಾಮಯ್ಯ, ವಿಪ್ರ ಸಮುದಾಯದ ವಿದ್ಯಾರ್ಥಿಗಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮುದಾಯದ 48 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 41 ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು, 62 ಅಶಕ್ತರಿಗೆ ಮಾಸಾಶನ ವಿತರಿಸಲಾಯಿತು.
ದಾನಿ ಎ.ವಿ.ಪದ್ಮಾ ಶಿವಶಂಕರ್ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನಾಚರಣೆ ಮಾಡಲಾಯಿತು.
ಗೌರಮ್ಮ ಸೀತಾರಾಮಯ್ಯ ಧಾರ್ಮಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಜಿ.ಸೀತಾರಾಮನ್, ಕವನ ವಿ.ವಸಿಷ್ಠ, ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ಹೆಚ್.ವಿ.ರೋಹಿಣಿ, ಸಂಘಟನಾ ಕಾರ್ಯದರ್ಶಿ ಎಸ್.ನಾಗೇಂದ್ರ, ನಿರ್ದೇಶಕಿ ಜಯಶ್ರೀ ಜೋಷಿ, ಖಜಾಂಚಿ ಹೆಚ್.ಆರ್.ಮೋಹನ್ ಉಪಸ್ಥಿತರಿದ್ದರು.
ರಾಧಾ ಬಾಲಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು, ಎ.ಎನ್.ಗೋಪಾಲಕೃಷ್ಣ ಸ್ವಾಗತಿಸಿದರು, ಕೆ.ಆರ್.ದತ್ತಾತ್ರಿ ವಂದಿಸಿದರು.