ವಿಮಾನದಲ್ಲಿ ಮಹಿಳೆಯ ಅಶ್ಲೀಲ ವರ್ತನೆ.. ಸಿಬ್ಬಂದಿಗೆ ಥಳಿಸಿ, ಅರೆಬೆತ್ತಲಾಗಿ ಓಡಾಟ…

49
firstsuddi

ಮುಂಬೈ: ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಅರೆನಗ್ನಳಾಗಿ ಅಶ್ಲೀಲ ವರ್ತನೆ ತೋರಿದ ಘಟನೆ ಏರ್ ವಿಸ್ತಾರ ವಿಮಾನವೊಂದರಲ್ಲಿ ನಿನ್ನೆ ನಡೆದಿದೆ.

ಏರ್ ವಿಸ್ತಾರದ ಯುಕೆ 256 ವಿಮಾನ ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದಾಗ ಈ ಘಟನೆ ನಡೆದಿರುವುದು ವರದಿಯಾಗಿದೆ.

ವರದಿಗಳ ಪ್ರಕಾರ, ಮಹಿಳೆ ಎಕನಾಮಿ ಟಿಕೆಟ್ ಪಡೆದಿದ್ದರೂ ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಳಿತುಕೊಳ್ಳಲು ಹಠ ಮಾಡಿದ್ದಾಳೆ. ಇದನ್ನು ತಡೆಯಲು ಪ್ರಯತ್ನಿಸಿದ ಕ್ಯಾಬಿನ್ ಸಿಬ್ಬಂದಿ ಮೇಲೆ ಆಕೆ ಹಲ್ಲೆ ನಡೆಸಿದ್ದಾಳೆ. ಮಾತ್ರವಲ್ಲದೇ ತಾನು ಧರಿಸಿದ್ದ ಕೆಲವು ಬಟ್ಟೆಗಳನ್ನು ಕಳಚಿ ಅರೆಬೆತ್ತಲಾಗಿ ಓಡಾಡಿದ್ದಾಳೆ.

ವಿಮಾನದಲ್ಲಿ ಗದ್ದಲ ಸೃಷ್ಟಿಸಿದ ಮಹಿಳೆ ಇಟಲಿಯ ಪಾವೊಲಾ ಪೆರುಸಿಯೋ ಎಂದು ಗುರುತಿಸಲಾಗಿದೆ. ಆಕೆ ಕುಡಿದ ಮತ್ತಿನಲ್ಲಿದ್ದಳು ಎನ್ನಲಾಗಿದೆ. ಈ ಘಟನೆ ಬಳಿಕ ಪೊಲೀಸರು ಈಕೆಯನ್ನು ಬಂಧಿಸಿದರಾದರೂ ಕೋರ್ಟ್ ನಲ್ಲಿ ಜಾಮೀನು ಸಿಕ್ಕಿದೆ.

ವಿಮಾನದೊಳಗೆ ಇಂಥ ಹತ್ತು ಹಲವು ವಿಚಿತ್ರ ಘಟನೆಗಳು ಬಹಳಷ್ಟು ಬಾರಿ ವರದಿಯಾಗುತ್ತಿರುತ್ತವೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಬಹಳ ದೊಡ್ಡ ಸುದ್ದಿಯಾಗಿತ್ತು.