ವಿಶ್ವವಿಖ್ಯಾತ ಮೈಸೂರು ದಸರಾಗೆ ವೈಭವದ ಚಾಲನೆ, ನಾಡದೇವಿಗೆ ಪುಷ್ಪಾರ್ಚನೆಗೈದು ಸಾಹಿತಿ ಹಂಪನಾರಿಂದ ಉದ್ಘಾಟನೆ.

17

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಇಂದು ಅರಮನೆ ನಗರಿ ಮೈಸೂರಿನಲ್ಲಿ ವೈಭವದ ಚಾಲನೆ ದೊರೆಯಿತು. ಮೈಸೂರು ದಸರಾದ ಉದ್ಘಾಟಕರಾದ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ಮಹಿಷಮರ್ಧಿನಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬಕ್ಕೆ ಚಾಲನೆ ನೀಡಿದರು. ವೃಶ್ಚಿಕ ಲಗ್ನದ ಶುಭಮುಹೂರ್ತದಲ್ಲಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ವೈಭವದ ಚಾಲನೆ ನೀಡಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಹಿತ ರಾಜ್ಯ ಸರ್ಕಾರದ ಪ್ರತಿನಿಧಿಗಳು, ಸಚಿವರು, ಶಾಸಕರು ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ನಂತರ ಮೈಸೂರು ದಸರಾದ ಉದ್ಘಾಟಕರಾದ ಹಿರಿಯ ಸಾಹಿತಿ ನಾಡೋಜ, ಡಾ.ಹಂಪಾ ನಾಗರಾಜಯ್ಯ ಅವರಿಗೆ ಜಿಲ್ಲಾಡಳಿತ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರು ಹಾರ, ಶಾಲು ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಿದರು. ನಂತರ ದಸರಾ ಉದ್ಘಾಟಕರಾದ ನಾಡೋಜ ಹಂಪ ನಾಗರಾಜಯ್ಯ ಚಾಮುಂಡಿ ತಾಯಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ವಂದಿಸಿ ಭಾಷಣ ಆರಂಭ ಮಾಡಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಹೆಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಹೆಚ್ ಕೆ ಪಾಟೀಲ್, ಶಿವರಾಜ್ ತಂಗಡಗಿ, ಶಾಸಕರಾದ ಜಿಟಿ ದೇವೇಗೌಡ, ತನ್ವಿರ್ ಸೇಠ್, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾಧು, ಕೆ ಹರೀಶ್ ಗೌಡ, ರವಿಶಂಕರ್, ಎ ಆರ್ ಕೃಷ್ಣಮೂರ್ತಿ, ಶ್ರೀವತ್ಸ, ರಮೇಶ್ ಬಂಡಿ ಸಿದ್ದೇಗೌಡ, ಡಾ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಮುಡಾ ಅಧ್ಯಕ್ಷ ಮರೀಗೌಡ, ಗ್ಯಾರಂಟಿ  ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಡಿಸಿ ಲಕ್ಷ್ಮಿಕಾಂತ ರೆಡ್ಡಿ ಭಾಗಿಯದರು. ನಾಡಹಬ್ಬ ದಸರಾ 2024 ಉದ್ಘಾಟನೆ ಹಿನ್ನಲೆ ಚಾಮುಂಡಿ ಬೆಟ್ಟ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ನಾನ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ದಸರಾ ಉದ್ಘಾಟನೆಗೆ ವೇದಿಕೆ ಸಿದ್ಧಗೊಂಡಿದ್ದು, ಗಣ್ಯರು ಕೂರುವ ವೇದಿಕೆಯ ಹಿಂದೆ ಎಲ್ಇಡಿ ಅಳವಡಿಕೆ ಮಾಡಲಾಗಿದೆ. ಒಂದು ಕಡೆ ಅರ್ಜುನ ಆನೆ ಅಂಬಾರಿ ಹೊರುವ ಫೋಟೋ, ಮತ್ತೊಂದು ಕಡೆ ಚಾಮುಂಡೇಶ್ವರಿ ತಾಯಿಯ ಫೋಟೋ ಹಾಕಿ ವೇದಿಕೆ ಸಿದ್ಧಪಡಿಸಲಾಗಿದೆ. ವೇದಿಕೆಯ ಬಲಭಾಗದಲ್ಲಿ ಬೆಳ್ಳಿಯ ಲೇಪನದ ರಥ ಇಟ್ಟಿರುವ ಜಿಲ್ಲಾಡಳಿತ, 1 ಸಾವಿರ ಜನ ಕೂರುವ ಆಸನದ ವ್ಯವಸ್ಥೆ ಮಾಡಿದೆ. ಚಾಮುಂಡಿ ಬೆಟ್ಟದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳ ಸ್ಥಳ ಪರಿಶೀಲನೆ ನಡೆಸಿದೆ. ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದ ನಂತರ ಚಲನಚಿತೋತ್ಸವ, ಆಹಾರಮೇಳ, ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಚಿತ್ರಕಲೆ ಹಾಗೂ ಕರಕುಶಲ ಕಲೆಗಳ ಪ್ರದರ್ಶನ, ಭಾರತ್ ಸೈಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳ, ರಂಗಾಯಣದಲ್ಲಿ ನವರಾತ್ರಿ ಜಾನಪದ ರಂಗೋತ್ಸವ ಹಾಗೂ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಆರಂಭಗೊಳ್ಳಲಿವೆ.