ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ, ಅವಳಿ ಮಕ್ಕಳು ಸಾವು ಆರೋಪ- ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಕುಟುಂಬಸ್ಥರು…

60
firstsuddi

ಗದಗ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ, ಅವಳಿ ಮಕ್ಕಳು ಮೃತಪಟ್ಟಿದ್ದಾರೆಂದು ಆರೋಪಿಸಿ ಮೃತ ಸಂಬಂಧಿಕರು ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕಾರೊಡಗಿಮಠ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ವಿರುಪಾಪುರ ಗ್ರಾಮದ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಗಜೇಂದ್ರಗಡ ಪಟ್ಟಣದ ಕಾರೊಡಗಿಮಠ ಖಾಸಗಿ ಆಸ್ಪತ್ರೆಗೆ ಫೆಬ್ರುವರಿ 2 ರಂದು 28 ವರ್ಷದ ತುಂಬು ಗರ್ಭಿಣಿ ನಂದಿನಿ ಹರಿಗೆಗೆ ಎಂದು ದಾಖಲಿಸಲಾಗಿತ್ತು. ಅಂದು ವೈದ್ಯರು ಎರಡು ಬಾರಿ ಸ್ಕ್ಯಾನ್ ಮಾಡಿದ್ದಾರೆ. ಆಗ ಎರಡು ಅವಳಿ ಮಕ್ಕಳು ಚೆನ್ನಾಗಿವೆ ಎಂದು ಹೇಳಿದ್ದಾರೆ.

ಸಿಜೆರಿಯನ್ ಮಾಡಿಯೇ ಹೆರಿಗೆ ಮಾಡಬೇಕಾಗುತ್ತೆ ಎಂದು ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ. ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದಾರೆ. ಫೆಬ್ರುವರಿ 2ರಂದು ಹೆರಿಗೆಯಾಗಿದ್ದು, ಮುದ್ದಾದ ಒಂದು ಗಂಡು, ಒಂದು ಹೆಣ್ಣು ಕಂದಮ್ಮಗಳಿಗೆ ಜನ್ಮ ನೀಡಿದ್ದಾಳೆ.

ಆದರೆ ಸಿಜೆರಿಯನ್ ಮಾಡಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಮೊದಲೇ ರಕ್ತದ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯದಿಂದ ಸಿಜೇರಿಯನ್ ಮಾಡಿದ್ದರಿಂದಲೇ ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿಗೆ ಲೋ ಬಿಪಿಯಾಗಿ ಅಸ್ವಸ್ಥಗೊಂಡ ಕಾರಣ ತಕ್ಷಣ ಅಲರ್ಟ್ ಆದ ವೈದ್ಯರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಇಂದು ಬಾಣಂತಿ ಮೃತಪಟ್ಟಿದ್ದಾಳೆ. ಅವಳಿ ಮಕ್ಕಳು ಸಹ ಮೃತಪಟ್ಟಿವೆ. ಬಾಣಂತಿ ನಂದಿನಿ, ಅವಳಿ ಮಕ್ಕಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕಾರೊಡಗಿಮಠ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆ ಸಂಬಂಧ ವಿಚಾರಣೆ ಮುಂದುವರಿದಿದೆ.