ಶರನ್ನವರಾತ್ರಿ ಹಬ್ಬ: ಪುರೋಹಿತ ಅಶ್ವಥ್ಥ ನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಮನೆಯಲ್ಲಿ ಸಾಂಪ್ರದಾಯಿಕ ಪಟ್ಟದ ಗೊಂಬೆಗಳ ಪ್ರತಿಷ್ಠಾಪನೆ…

48
firstsuddi

ಚಿಕ್ಕಮಗಳೂರು: ಶರನ್ನವರಾತ್ರಿ ಹಬ್ಬದ ಅಂಗವಾಗಿ ನಗರದ ಕೋಟೆಯ ಅಗ್ರಹಾರ ವೃತ್ತದ ಬಳಿ ಇರುವ ಪುರೋಹಿತ ಅಶ್ವಥ್ಥ ನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ.

ಯಧುವಂಶಸ್ಥರ ಪರಂಪರೆಯ ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂಸವಾರಿ, ಅರಮನೆ, ಅರಸರ ಸಾಂಪ್ರದಾಯಿಕ ಆಚರಣೆಗಳ ವೈಭವವನ್ನು ಸಾರುತ್ತಿದ್ದರೆ, ಇನ್ನೂ ಕೆಲವು ಗೊಂಬೆಗಳು ವಿವಿಧ ದೇವತೆಗಳ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿವೆ.

ಕಲಿಯುಗದ ಹೆದ್ದೈವ ಪದ್ಮಾವತಿ ಹಾಗೂ ಶ್ರೀನಿವಾಸನ ವಿವಾಹದ ವೈಭವವನ್ನು ಸಾರುವ ಶ್ರೀನಿವಾಸ ಕಲ್ಯಾಣದ ಗೊಂಬೆಗಳು ನೋಡುಗರ ಗಮನ ಸೆಳೆಯುತ್ತಿವೆ. ವರನ ದಿಬ್ಬಣವನ್ನು ಎದುರುಗೊಳ್ಳುವುದು, ವರಪೂಜೆ, ಮಾಂಗಲ್ಯಧಾರಣೆ, ಲಾಜಾಹೋಮ, ಸಪ್ತಪದಿ ತುಳಿಯುವುದು ಸೇರಿದಂತೆ ಮದುವೆಯ ವಿವಿಧ ವಿಧಿವಿಧಾನಗಳನ್ನು ಪರಿಚಯಿಸುತ್ತಿವೆ.

ತಿರುಮಲ ತಿರುಪತಿಯ ಸಪ್ತಗಿರಿ ಬೆಟ್ಟ, ಅಲ್ಲಿನ ಪ್ರಕೃತಿಯ ಸೌಂದರ್ಯ, ಶ್ರೀವೆಂಕಟೇಶ್ವರ ದೇವಾಲಯದ ಸ್ತಬ್ಧಚಿತ್ರ, ದೇವತೆಗಳು ಮತ್ತು ರಾಕ್ಷಸರ ನಡುವಿನ ಅಮೃತ ಮಥನದ ದೃಶ್ಯಗಳು, ಪ್ರಾಚೀನ ಕಾಲದ ಗುರುಕುಲ ಪದ್ಧತಿಯ ಗೊಂಬೆಗಳು ಗಮನ ಸೆಳೆಯುತ್ತಿವೆ.

ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ತನ್ನ ಬೆರಳಿನಲ್ಲಿ ಎತ್ತಿ ಹಿಡಿದು ಗೋಪಾಲಕರು ಮತ್ತು ಗೋವುಗಳನ್ನು ರಕ್ಷಿಸುವ ದೃಶ್ಯ, ಕೈಲಾಸ ಪರ್ವತದಲ್ಲಿ ಬ್ರಹ್ಮ, ವಿಷ್ಣು, ನಂದಿ, ಭೃಂಗಿ, ಶಿವಗಣಗಳ ಋಷಿಮುನಿಗಳ ನಡುವೆ ಶಿವ ಪಾರ್ವತಿಯರ ಒಡ್ಡೋಲಗದ ದೃಶ್ಯ ಕಣ್ಮನ ಸೆಳೆಯುತ್ತಿವೆ.

ಭಗವಾನ್ ಶ್ರೀಕೃಷ್ಣನ ಗೀತೋಪದೇಶದ ಗೊಂಬೆಗಳು, ಮಹಾವಿಷ್ಟುವಿನ ದಶವತಾರದ ಗೊಂಬೆಗಳು, ಕೃಷಿ ಚಟುವಟಿಕೆ, ಸಂತೆಯ ದೃಶ್ಯ, ಭಾರತೀಯ ಹಬ್ಬ ಹರಿದಿನಗಳ ಆಚರಣೆಗಳನ್ನು ಸಂಪ್ರದಾಯಗಳನ್ನು ತೆರೆದಿಡುವ ನೂರಾರು ಗೊಂಬೆಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತಿವೆ.

ಪಟ್ಟದ ಗೊಂಬೆಗಳ ಕುರಿತು ವಿವರಿಸಿದ ಅನುರಾಧಾ ಜೋಶಿ, ತಮ್ಮ ತವರು ಮನೆಯ ನವರಾತ್ರಿ ಹಬ್ಬದ ಸಂಪ್ರದಾಯವನ್ನು ತಾವು ಮನೆಯವರ ಪ್ರೋತ್ಸಾಹ ಮತ್ತು ಸಹಕಾರದಿಂದಾಗಿ ಮುಂದೂವರೆಸಿಕೊಂಡು ಬರುತ್ತಿದ್ದು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಉಳಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.

ಪುರೋಹಿತ ಅಶ್ವಥ್ಥ ನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಮಾತನಾಡಿ, ಆಧುನಿಕತೆಯ ಭರದಲ್ಲಿ ನಮ್ಮ ಮಕ್ಕಳು ಮತ್ತು ಯುವಜನತೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಆಚರಣೆಗಳನ್ನು ಮರೆಯುತ್ತಿದ್ದಾರೆ ಹಾಗಾಗಿ ಅವುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಪಟ್ಟದ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.