ಬೆಂಗಳೂರು : ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸತೀಶ್ ರೆಡ್ಡಿ ಆಪ್ತ ಸಹಾಯಕ ನೀಡಿದ ದೂರಿನನ್ವಯ ಎನ್.ಸಿ.ಆರ್ ದಾಖಲಿಸಿದ್ದ ಬೊಮ್ಮನಹಳ್ಳಿ ಠಾಣೆ ಪೊಲೀಸರು, ಬಳಿಕ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಆಕಾಶ್, ಗಗನ್ ಬಂಧಿತ ಆರೋಪಿಗಳು. ಬಂಧಿತರನ್ನು ಕಸ್ಟಡಿಗೆ ಪಡೆದುಕೊಂಡು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ಆರೋಪಿ ವಿಲ್ಸನ್ ಗಾರ್ಡನ್ ನಾಗ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ.
ಶಾಸಕರ ಪಿಎ ಹರೀಶ್ ಬಾಬು ಅವರಿಗೆ ಬೊಮ್ಮನಹಳ್ಳಿ ನಿವಾಸಿ ಚಂದ್ರು ಎಂಬುವವರು ಕರೆ ಮಾಡಿ, ಶಾಸಕರ ಹತ್ಯೆಗೆ ಸಂಚು ನಡೆದಿದೆ ಎಂದು ಭೈರೇಶ್ ಎಂಬುವನು ಫೋನ್ ಮಾಡಿ ವಿಚಾರ ತಿಳಿಸಿದ್ದಾಗಿ ಹರೀಶ್ ಬಾಬು ಬಳಿ ಹೇಳಿದ್ದ. ಭೈರೇಶ್ ಗೆ ಆತನ ಸ್ನೇಹಿತ ಹೊಳಲ್ಕೆರೆಯ ಆಕಾಶ್ ವಿಚಾರ ತಿಳಿಸಿದ್ದಾಗಿ ಹೇಳಿದ್ದ. ವಿಲ್ಸನ್ ಗಾರ್ಡನ್ ನಾಗ ಎರಡು ಕೋಟಿ ರೂ.ಗೆ ಸುಪಾರಿ ಪಡೆದಿದ್ದಾನೆ. ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಚಂದ್ರು ತಿಳಿಸಿದ್ದ. ಈ ವಿಚಾರ ತಿಳಿದು ಹರೀಶ್ ಬಾಬು ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿ, ಆರೋಪಿಗಳು ಎಲ್ಲೆಲ್ಲಿ ಓಡಾಡಿದ್ದಾರೆ ಎನ್ನುವ ಬಗ್ಗೆ ಪೊಲೀಸರ ಮಾಹಿತಿ ಪಡೆದುಕೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡಲ್ಲ. ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ ಸುಪಾರಿ ನೀಡಿದ ಬಗ್ಗೆ ಮಾತಾಡಿರುವ ಆಡಿಯೋ ಸಿಕ್ಕಿದೆ. ಉದ್ಯಮದ ಕಾರಣಕ್ಕೆ ನನ್ನ ಕೊಲೆಗೆ ಸುಪಾರಿ ನೀಡಿಲ್ಲ.ಯಾಕಂದ್ರೆ ರಾಜಕಾರಣದಲ್ಲೇ ಇದ್ದೇನೆ. ಈಗ ಯಾವುದೇ ಉದ್ಯಮದಲ್ಲಿ ಇಲ್ಲ. ರಾಜಕೀಯ ಕಾರಣದಿಂದಲೇ ನನ್ನ ಹತ್ಯೆಗೆ ಸುಪಾರಿ ನೀಡಿದ್ದಾರೆ. ನಾನು ಭಯ ಪಡುವುದಿಲ್ಲ. ಪೊಲೀಸರು ಪಾರದರ್ಶಕ ತನಿಖೆ ನಡೆಸಿ ಆರೋಪಿಗಳನ್ನು ಜೈಲಿಗಟ್ಟಲಿ ಎಂದು ಹೇಳಿದರು.
ಇನ್ನು ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ಕೇಸ್ ಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಸುಪಾರಿ ನೀಡಿದವರು ಯಾವುದೇ ಪಕ್ಷದವರ ಆಗಲಿ ಕ್ರಮ ಕೈಗೊಳ್ಳುತ್ತೇವೆ. ಇಂತಹ ಘಟನೆಗಳು ನಡೆಯಲು ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ನಲ್ಲಿ ಕೆಲವರ ಹೆಸರಿದೆ, ವಶಕ್ಕೆ ಪಡೆದು ವಿಚಾರಣೆ ಸಹ ನಡೆದಿದೆ. ಶಾಸಕರಿಗೆ ಯಾವುದೇ ಬೆದರಿಕೆಯಿದ್ರೂ ಪೊಲೀಸರು ರಕ್ಷಣೆ ನೀಡುತ್ತಾರೆ ಎಂದು ತಿಳಿಸಿದರು.










