ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ; 144 ಸೆಕ್ಷನ್ ಜಾರಿ…

54
firstsuddi

ಶಿವಮೊಗ್ಗ : ಅಮೃತ ಮಹೋತ್ಸವದ ಆಚರಣೆ ದಿನದಂದೇ ನಗರದಲ್ಲಿ ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್  ಭಾವಚಿತ್ರ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದರು. ಸಾವರ್ಕರ್ ಫ್ಲೆಕ್ಸ್ ಆಳವಡಿಕೆಗೆ ಟಿಪ್ಪು ಸುಲ್ತಾನ್ ಸಂಘಟನೆ ವಿರೋಧಿಸಿ ಫ್ಲೆಕ್ಸ್ ತೆರವಿಗೆ ಮುಂದಾಗಿದೆ. ಆಗ ಗಲಾಟೆ ಶುರುವಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.  

ಸಾವರ್ಕರ್ ಭಾವಚಿತ್ರ ತಗೆದ ಹಿನ್ನಲೆ ಸ್ಥಳದಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಮತ್ತೊಂದು ಸಾವರ್ಕರ್ ಫ್ಲೆಕ್ಸ್ ಹಾಕಲು ಕಾರ್ಯಕರ್ತರು ಮುಂದಾಗಿದ್ದಾರೆ. ಆದ್ರೆ ಫ್ಲೆಕ್ಸ್ ಹಾಕುವುದನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರ ಜೊತೆ ಹಿಂದೂ ಪರ ಕಾರ್ಯಕರ್ತರ ಮಾತಿನ ಚಕಮಕಿ ಆಗಿದೆ. ಫ್ಲೆಕ್ಸ್ ಹಾಕಲು ಬಂದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ವೀರ ಸಾವರ್ಕರ್ ಫೋಟೋ ಅಳವಡಿಕೆ ವಿವಾದ ತಾರಕ್ಕೇರುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ 144 ಜಾರಿಗೊಳಿಸಲಾಗಿದೆ. ಎಲ್ಲೆಡೆ ತೀವ್ರ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. 3 ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇನ್ನು ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಘಟನೆ ನಡೆದ ಬೆನ್ನಲ್ಲೇ ಯುವಕನಿಗೆ ಚಾಕು ಇರಿಯಲಾಗಿದೆ. ನಗರದ ಗಾಂಧಿಬಜಾರ್ ನಲ್ಲಿ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮನೆ ಮುಂದೆ ನಿಂತಿದ್ದ ಪ್ರೇಮ್ ಸಿಂಗ್ (26) ಮೇಲೆ ದಾಳಿ ನಡೆಸಿ ಚಾಕು ಇರಿದಿದ್ದಾರೆ. ಚಾಕು ಇರಿತಕ್ಕೊಳಗಾದ ಯುವಕ ಪ್ರೇಮ್ ಸಿಂಗ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.