ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ ರಾತ್ರಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಕಾರ್ಯಕರ್ತ ಮೃತ ಹರ್ಷನ ಕುಟುಂಬಸ್ಥರಿಗೆ ಅನ್ಯಕೋಮಿನ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೇ ಓರ್ವ ಯುವಕನ ಮೇಲೆಯೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.
ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು 2 ಬೈಕ್ ಗಳಲ್ಲಿ ಬಂದ 6 ಮಂದಿ ಮುಸ್ಲಿಂ ಯುವಕರು ಸೀಗೆಹಟ್ಟಿಯ ಹರ್ಷನ ನಿವಾಸ, ರವಿ ವರ್ಮ ಬೀದಿ, ಕೆ.ಆರ್ ಪುರಂ ರಸ್ತೆ ಮುಂತಾದೆಡೆ ಮಚ್ಚು-ಲಾಂಗ್ ಹಿಡಿದು ಭಯ ಹುಟ್ಟಿಸಿದ್ದಾರೆ. ಬಳಿಕ ಬೈಕ್ ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರ ಗುಂಪು ದುಷ್ಕರ್ಮಿಗಳನ್ನು ಹಿಂಬಾಲಿಸಿದ್ದಾರೆ. ಪರಾರಿಯಾಗುವ ವೇಳೆ ಕಿಡಿಗೇಡಿಗಳು ಭರಮಪ್ಪ ನಗರದಲ್ಲಿ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಕಾಲ್ಕಿತ್ತಿದ್ದಾರೆ. ಪ್ರಕಾಶ್ (25) ಎಂಬಾತ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್, ಯುವಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಚೇತರಿಸಿಕೊಂಡಿದ್ದಾನೆ. ಬೈಕ್ ನಲ್ಲಿ ಬಂದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಘೋಷಣೆಗಳನ್ನ ಕೂಗಿ ವಾಪಸ್ ಮರಳುವಾಗ ಯುವಕನಿಗೆ ಕಲ್ಲಿನಿಂದ ಹೊಡೆದು ತೆರಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ ಎಂದರು.










