ಶಿವಮೊಗ್ಗ: ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿಂದು ನಡೆದ ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಹೆಸರಿಡುತ್ತೇವೆ. ಯಾಕಂದ್ರೆ, ಅಲ್ಲಮಪ್ರಭು ಅವರು ಶಿವಮೊಗ್ಗ ಜಿಲ್ಲೆಯವರೇ. ಅಲ್ಲದೇ ಅವರು ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಹೀಗಾಗಿ ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭುರವರ ಹೆಸರು ಸೂಕ್ತ ಎಂದು ಘೋಷಿಸಿದರು.
ಅಲ್ಲಮ ಪ್ರಭು ಒಬ್ಬ ಶ್ರೇಷ್ಠ ಕವಿಯಾಗಿದ್ದು, ಅವರು ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ನಮ್ಮ ನಾಡಿಗೆ ಅವರ ಕೊಡುಗೆ ಅಪಾರವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಶಯದಂತೆ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರನ್ನು ಇಡುವುದು ಸೂಕ್ತ ಎಂದು ನಾನೂ ಸಹ ಭಾವಿಸಿದ್ದೇನೆ. ಹೀಗಾಗಿ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಎಂದು ನಾಮಕರಣ ಮಾಡಲು ನಾನು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.










