ಶೆಟ್ಟರ್‌ಗೆ ಟಿಕೆಟ್ ತಪ್ಪಲು ನಾನು ಕಾರಣವಲ್ಲ, ಎಲ್ಲವೂ ಸುಳ್ಳು ವದಂತಿ : ಬೊಮ್ಮಾಯಿ

72
firstsuddi

ಹಾವೇರಿ/ಹುಬ್ಬಳ್ಳಿ: ಶೆಟ್ಟರ್‌ಗೆ ಟಿಕೆಟ್ ತಪ್ಪಲು ನಾನು ಕಾರಣವಲ್ಲ, ಎಲ್ಲವೂ ಸುಳ್ಳು ವದಂತಿ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.

ಬೊಮ್ಮಾಯಿ ನಾಮಪತ್ರ ಸಲ್ಲಿಕೆಗೂ ಮುನ್ನ ಹುಬ್ಬಳ್ಳಿಯ  ಶ್ರೀ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಣದ ಪುರಸಭೆ ಬಳಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಗ್ರಾಮ ದೇವತೆಯ ದರ್ಶನ ಪಡೆದು, ಅಂಬೇಡ್ಕರ್ ಮೂರ್ತಿಗೆ ಹಾರ ಹಾಕಿದ ಸಿಎಂ ಬಳಿಕ ತಮ್ಮ ಕುಟುಂಬಸ್ಥರು ಹಾಗೂ ಮುಖಂಡರೊಡನೆ ನಾಮಪತ್ರ ಸಲ್ಲಿಕೆಗೆ ತಹಸೀಲ್ದಾರ್ ಕಚೇರಿಗೆ ತೆರಳಿದರು. 

ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಶೆಟ್ಟರ್‌ಗೆ ಟಿಕೆಟ್ ತಪ್ಪಿಸುತ್ತಿರೋದು ನಾವಲ್ಲ. ನೂರಾರು ಜನ ನೂರಾರು ಆರೋಪ ಮಾಡ್ತಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸುಳ್ಳು ವದಂತಿ. ಈವರೆಗೂ ನಾವು ಪಕ್ಷದ ವರಿಷ್ಠರ ಜತೆ ಸಂಪರ್ಕದಲ್ಲಿದ್ದೇವೆ. ನಾವು ಹಾಗೂ ಶೆಟ್ಟರ್ ಬಹಳ ಆತ್ಮೀಯರು. ಯಾವುದೇ ಕಾರಣಕ್ಕೂ ಅಂತಹ ಕೆಲಸ ಮಾಡುವುದಿಲ್ಲ. ಜಗದೀಶ್ ಶೆಟ್ಟರ್ ಮನವೊಲಿಕೆ ಪ್ರಯತ್ನ ಮಾಡಿದ್ದೇವೆ. ಇವತ್ತಿಗೂ ಪ್ರಯತ್ನ ನಡೆಯುತ್ತಿದೆ ಎಂದರು.

ನಿನ್ನೆ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ. ಶೆಟ್ಟರ್ ಅವರದ್ದು ಜನಸಂಘ ಕಾಲದ ಮನೆತನ. ಬಿಜೆಪಿಗೆ ಶೆಟ್ಟರ್ ಅತ್ಯಂತ ನಿಷ್ಠರು. ಅವರು ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆ. ಅತ್ಯಂತ ಅವಶ್ಯ ಇರೋ ನಾಯಕನನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ. ಈ ಬಗ್ಗೆ ಜೆಪಿ ನಡ್ಡಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.