ಛತ್ತೀಸ್‌ಗಢ : ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಹೇಳಿ 16 ವರ್ಷದ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವರದಿಯಾಗಿದೆ.
ಡಿಸೆಂಬರ್ 2ರಂದು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವ ನೆಪದಲ್ಲಿ ಆರೋಪಿ ಸಂತ್ರಸ್ತೆಯ ಪೋಷಕರಿಗೂ ತಿಳಿಸದೆ ಆಕೆಯನ್ನು ಶಾಲೆಯಿಂದ ಬಲವಂತವಾಗಿ ತನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಬಾಲಕಿಯ ಅಕ್ಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದಾಗಿ ಶಿಕ್ಷಕ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
ಅತ್ಯಾಚಾರದ ವಿಷಯ ತಿಳಿದ ಸಂತ್ರಸ್ತೆಯ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕನನ್ನು ಬಂಧಿಸಿದ್ದು, ಆತನ ವಿರುದ್ಧ ವಿರುದ್ಧ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.










