ಬೆಂಗಳೂರು : ಶಾಸಕ ಶ್ರೀಮಂತ್ ಪಾಟೀಲ್ ಅವರು ಮುಂಬೈ ಆಸ್ಪತ್ರೆಗೆ ದಾಖಲಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮೈತ್ರಿ ಪಕ್ಷ ಹಾಗೂ ಪ್ರತಿ ಪಕ್ಷ ಸದಸ್ಯರ ನಡುವೆ ವಾಗ್ವಾದ ಸಂಭವಿಸಿದ್ದು, ಈ ಕುರಿತು ಸ್ಪೀಕರ್ ರಮೇಶ್ ಕುಮಾರ್ ಅವರು, ಇಂದು ಬೆಳಿಗ್ಗೆ ಶ್ರೀಮಂತ್ ಪಾಟೀಲ್ ಅವರು ಸಹಿ ಮಾಡಿದ್ದಾರೆ ಎನ್ನಲಾದ ಪತ್ರ ನನಗೆ ಸಿಕ್ಕಿದೆ. ನಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂಬೈನ ಸೆಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ನಾನು ಇಂದು ನಡೆಯುವ ಸದನಕ್ಕೆ ಗೈರಾಗುತ್ತೇನೆ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಸ್ಪೀಕರ್ ಅವರಿಗೆ ಸಲ್ಲಿಸಬೇಕಾದ ರೀತಿಯಲ್ಲಿ ಈ ಪತ್ರ ಬರೆದಿಲ್ಲ, ಲೆಟರ್ ಪ್ಯಾಡ್ ಕೂಡಾ ಇಲ್ಲ, ಇದರಿಂದ ಶ್ರೀಮಂತ್ ಪಾಟೀಲ್ ಅವರ ಪತ್ರ ಸಹಜವೆಂಬಂತೆ ಕಾಣುತ್ತಿಲ್ಲ. ಹೀಗಾಗಿ ಶ್ರೀಮಂತ್ ಪಾಟೀಲ್ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ನಾನು ಗೃಹಸಚಿವರಿಗೆ ಸೂಚಿಸುತ್ತೇನೆ ಎಂದು ಹೇಳಿದರು.










