ಚಿಕ್ಕಮಗಳೂರು : ಬಸವರಾಜ ಕಟ್ಟೀಮನಿ ಅವರ ಬದುಕು ಹಾಗೂ ಬರಹಗಳ ಮರುಚಿಂತನೆಯಾಗಬೇಕು : ಡಾ|| ಕುಮಾರ್…

299
firstsuddi

ಚಿಕ್ಕಮಗಳೂರು : ಸಾಹಿತಿ ಬಸವರಾಜ ಕಟ್ಟೀಮನಿ ಅವರು ಕೇವಲ ಐಡಿಯಾಲಜಿಯನ್ನು ಹೇಳುತ್ತಾ ಕುಳಿತವರಲ್ಲ, ಅವುಗಳನ್ನು ನನಸಾಗಿಸಲು ಖುದ್ದು ಹೋರಾಟ ನಡೆಸಿದವರು ಎಂದು ಹಿರಿಯ ಸಾಹಿತಿ ಪ್ರೊ|| ಮಲ್ಲಿಕಾರ್ಜುನ ಹಿರೇಮಠ ಹೇಳಿದರು.
ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಶ್ರೀ ತರಳಬಾಳು ಜಗದ್ಗುರು ಮಹಿಳಾ ವಿದ್ಯಾಲಯ ಹಾಗೂ ಕ್ಯಾತನಬೀಡು ಪ್ರತಿಷ್ಠಾನ ನಗರದ ಎಸ್.ಟಿ.ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಬಸವರಾಜ ಕಟ್ಟೀಮನಿ : ಮರುಚಿಂತನ – ರಾಜ್ಯ ಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟ್ಟೀಮನಿ ಅವರು ಸಾಹಿತ್ಯದ ಕೃಷಿಯ ಜೊತೆಗೆ ರೈತ ಚಳುವಳಿ, ಗೋಕಾಕ್ ಚಳುವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು, ಸಮಾಜದಲ್ಲಿರುವ ದೌರ್ಜನ್ಯ, ಶೋಷಣೆ, ಅನ್ಯಾಯದ ಬಗ್ಗೆ ಲೇಖನಗಳನ್ನು ಬರೆಯುವುದರ ಜೊತೆಗೆ ಅವುಗಳ ವಿರುದ್ದ ಹೋರಾಟವನ್ನೂ ನಡೆಸಿದ್ದರು ಎಂದರು.
ಇಂದಿನ ವಿದ್ಯಾರ್ಥಿಗಳು ಕಟ್ಟೀಮನಿಯವರ ಸಾಹಿತ್ಯವನ್ನು ಓದಬೇಕು, ವೈಚಾರಿಕತೆ, ಓದುವ, ಕೇಳುವ ಸಂಸ್ಕøತಿಯನ್ನು ಬೆಳೆಸಿಕೊಳ್ಳಬೇಕು, ಚಿಕಿತ್ಸಕ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ|| ಕುಮಾರ್ ಪ್ರಗತಿಶೀಲ ಸಾಹಿತಿಗಳಲ್ಲಿ ಬಸವರಾಜ ಕಟ್ಟೀಮನಿ ಸಹ ಒಬ್ಬರು, ಮಹಾನ್ ಚಿಂತಕರಾಗಿದ್ದ ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ಬರಹ, ಸಾಹಿತ್ಯ ಚಿಂತನೆ ನಮ್ಮ ಮುಂದಿದ್ದು ಅವುಗಳಿಗೆ ಸಾವು ಬರದಂತೆ ನಾವು ನೋಡಿಕೊಳ್ಳಬೇಕು, ಕಟ್ಟೀಮನಿ ಅವರ ಬದುಕು, ಬರಹಗಳ ಮರುಚಿಂತನೆಯಾಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸದಸ್ಯ ಡಾ|| ಬಸವರಾಜ ಸಾದರ ಕಟ್ಟೀಮನಿಯವರು ಹುಟ್ಟಿ ಇಂದಿಗೆ ನೂರು ವರ್ಷಗಳಾಗಿದ್ದು ಹಾಗಾಗಿ ರಾಜ್ಯಾದ್ಯಂತ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಗುತ್ತದೆ, ಅವರ ಬದುಕು ಮತ್ತು ಬರಹಗಳನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮರು ಚಿಂತನೆ-ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಬೆಳಗಿನಿಂದ ಮಧ್ಯಾಹ್ನದವರೆಗೆ ನಡೆದ ವಿವಿಧ ಗೋಷ್ಠಿಗಳಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ|| ರಾಮಕೃಷ್ಣ ಮರಾಠೆ, ಎಸ್.ಟಿ.ಜೆ ಕಾಲೇಜಿನ ಪ್ರಾಚಾರ್ಯೆ ಪ್ರೊ|| ಜೆ.ಕೆ.ಭಾರತಿ, ನಿವೃತ್ತ ಡಿವೈಎಸ್‍ಪಿ ಡಿ.ಡಿ.ಮಾಳಗಿ, ಉಪನ್ಯಾಸ ನೀಡಿದರು.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಶ್ರಿರೀಶ ಜೋಷಿ, ಎಸ್.ಟಿ.ಜಿ ಪಿಯು ಕಾಲೇಜಿನ ಪ್ರಾಂಶುಪಾಲ ಹಳದಪ್ಪ, ತರಳಬಾಳು ಶಿಕ್ಷಣ ಸಂಸ್ಥೆಯ ಪ್ರಾದೇಶಿಕ ಅಧಿಕಾರಿ ಕೆ.ಎಸ್.ನಂಜುಂಡಪ್ಪ, ಸಾಹಿತಿ ಡಾ|| ಬಾಳಾ ಸಾಹೇಬ ಲೋಕಾಪುರ ಉಪಸ್ಥಿತರಿದ್ದರು.
ಉಪನ್ಯಾಸಕ ಚಂದ್ರಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು, ಕ್ಯಾತನಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್ ಬಸಪ್ಪ ಸ್ವಾಗತಿಸಿದರು, ನಿರ್ದೇಶಕ ಡಿ.ಎಂ.ಮಂಜುನಾಥ ಸ್ವಾಮಿ ವಂದಿಸಿದರು.