ಸದಾನಂದಗೌಡ ಪಕ್ಷಕ್ಕೆ ಸೇರುತ್ತಾರೆಂದರೆ ಸ್ವಾಗತ: ಡಿಕೆ ಶಿವಕುಮಾರ್

25
firstsuddi

ಕಲಬುರಗಿ: ಬಹಳಷ್ಟು ಜನರು ನಮ್ಮನ್ನು ಭೇಟಿಯಾಗಿದ್ದಾರೆ. ನಿನ್ನೆ ಜಯಪ್ರಕಾಶ್ ಹೆಗ್ಡೆ, ಎಂ.ಪಿ.ಕುಮಾರಸ್ವಾಮಿ ಪಕ್ಷ ಸೇರಿದ್ದಾರೆ. ಇನ್ನೂ ಬಹಳ ಜನರು ಪಕ್ಷಕ್ಕೆ ಬರಲಿದ್ದಾರೆ. ಅದರಲ್ಲಿ ಬಿಜೆಪಿಯ ಸಂಸದರು ಸಹ ನನ್ನನ್ನು ಭೇಟಿ ಮಾಡಿದ್ದಾರೆ. ಭೇಟಿ ಮಾಡಿದವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಮಾಜಿ ಮುಖ್ಯಮಂತ್ರಿಗಳು ಸದಾನಂದಗೌಡ ಅವರು ಪಕ್ಷಕ್ಕೆ ಸೇರುತ್ತಾರೆಂದರೆ ಸ್ವಾಗತ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಸಿಇಸಿ ಸಭೆಯಾಗಬೇಕು ಸಭೆ ಬಳಿಕ, ಮಾ.15ರಂದು ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗುತ್ತೆ ಎಂದು ತಿಳಿಸಿದರು.

ಇನ್ನು ಬೆಂಗಳೂರು ಸೇರಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಬೆಂಗಳೂರು ನಗರದಲ್ಲಿ 70 ಬೋರ್​ವೆಲ್​ಗಳು ಬತ್ತಿ ಹೋಗಿವೆ. ಆದರೆ ಸಮರ್ಪಕವಾಗಿ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳು ಕೂಡ ಸಭೆ ನಡೆಸಿ ಸೂಚನೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಮೋದಿಯವರು ಇಲ್ಲಿಯವರೆಗೆ ಮಾತನಾಡಿಲ್ಲ. ಅದರ ಅರ್ಥ ಮೌನಂ ಸಮ್ಮತಿ ಲಕ್ಷಣಂ ಅಂತ. ಹೆಗಡೆಯವರ ಹೇಳಿಕೆ, ಬಿಜೆಪಿ ಹೇಳಿಕೆಯಾಗಿದೆ ಎಂದು ವಾಗ್ದಾಳಿ ಮಾಡಿದರು.

ನಾನು (ಡಿಕೆ ಶಿವಕುಮಾರ್) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇರೆ ಬೇರೆಯಾಗಿ ಸಮಾವೇಶ ಮಾಡುತ್ತಿದ್ದೇವೆ. ಇವತ್ತು ಸಿಎಂ ಉಡುಪಿ ಮತ್ತು ಕೋಲಾರಕ್ಕೆ ಹೋಗುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡಬೇಕಿದೆ. ಅದಕ್ಕೆ ನಾನು ಖರ್ಗೆ ಸಾಹೇಬರು ಬಂದಿದ್ದೇವೆ. ಇನ್ನು ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ, ನಾನೇ ಅಭ್ಯರ್ಥಿ ಎಂದರು. ನಾವು ಚುನಾವಣೆಗೋಸ್ಕರ ಗ್ಯಾರೆಂಟಿ ಜಾರಿ ಮಾಡಿಲ್ಲ. ಜನರ ಬದುಕಿಗೆ ಒಳ್ಳೆಯದಾಗಲಿ ಅಂತ ಮಾಡಿದ್ದೇವೆ ಎಂದರು.