ಮೈಸೂರು : ಸಕಾಲಕ್ಕೆ ಚಿಕಿತ್ಸೆ ಸಿಗದೇ ಪೊಲೀಸ್ ಪೇದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಪೇದೆಗೆ ಆಗಸ್ಟ್ 12ರಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ಬಳಿಕ ಅವರು ಹೋಮ್ ಐಸೋಲೇಷನ್ ಆಗಿದ್ದರು. ಐಸೋಲೇಷನ್‍ನಲ್ಲಿದ್ದ ಅವರಿಗೆ ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಬಸ್ಥರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ತಡವಾಗಿ ಆಗಮಿಸಿತ್ತು. ಆಂಬುಲೆನ್ಸ್ ಬಂದ ಕೂಡಲೇ ಪೇದೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ಕೊರೊನಾ ಸೋಂಕಿತ ಪೇದೆಯನ್ನು ಆಸ್ಪತ್ರೆಯೊಳಗೆ ರವಾನಿಸಲು ನಿರ್ಲಕ್ಷ ವಹಿಸಿದ್ದರು. ಇದರಿಂದ ಪೇದೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ.










