ಸರ್ಕಾರದಿಂದ ಬೇಡಿಕೆ ಈಡೇರಿಸುವುದಾಗಿ ಭರವಸೆ- ಬಂದ್ ಹಿಂಪಡೆದ ಖಾಸಗಿ ಸಾರಿಗೆ ಒಕ್ಕೂಟ…

57
firstsuddi

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಾರಿಗೆಗಳಿಗೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ನಗರ ಬಂದ್‍ಗೆ ಕರೆ ನೀಡಿತ್ತು. ಆದರೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮನವಿ ಮಾಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಹಿಂಪಡೆದಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿದ್ದಾರೆ. ಇದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆವರೆಗೂ ಇದ್ದ ಬಂದ್ ಮಧ್ಯಾಹ್ನ 3 ಗಂಟೆ ವೇಳೆಗೆ ಕೈಬಿಡಲಾಗಿದೆ. ಇದರಿಂದ ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆಯ ವಾಹನಗಳು ಎಂದಿನಂತೆ ರಸ್ತೆಗಿಳಿದಿದ್ದು, ಬೆಂಗಳೂರಿನ ಜನ ನಿಟ್ಟುಸಿರು ಬಿಡುವಂತಾಗಿದೆ.

ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, 37 ಸಂಘಟನೆಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೀರಿ. ನನ್ನನ್ನೂ ನಿಮ್ಮ ಜೊತೆ ಸೇರಿಸಿಕೊಳ್ಳಿ. ನಿಮ್ಮ ಬೇಡಿಕೆಗಳಲ್ಲಿ ಶಕ್ತಿ ಯೋಜನೆ ಹಾಗೂ ತೆರಿಗೆ ಎರಡು ಬೇಡಿಕೆ ನಮ್ಮ ಸರ್ಕಾರದಿಂದ ಆಗಿರುವ ಸಮಸ್ಯೆ. ಉಳಿದೆಲ್ಲಾ ಬೇಡಿಕೆಗಳು ಎಲ್ಲಾ ಹಿಂದಿನ ಸರ್ಕಾರದಲ್ಲಿ ಆಗಿರುವುದು. ಆದಾಗ್ಯೂ ಈ ಬೇಡಿಕೆಗಳನ್ನ ಈಡೇರಿಸುವುದಾಗಿ ಹೇಳಿದ್ದೇನೆ, ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಚಾಲಕರ ನಿಗಮ ಮಾಡಬೇಕು ಅಂತಾ ಬೇಡಿಕೆ ಇದೆ, ಖಂಡಿತವಾಗಿಯೂ ಮಾಡುತ್ತೇವೆ. ಇಂದಿರಾ ಕ್ಯಾಂಟಿನ್ ಓಪನ್ ಮಾಡ್ತೇವೆ. ಅಗ್ರಿಗೇಟರ್ ಆ್ಯಪ್ ಮಾಡಬೇಕೆಂಬ ಬೇಡಿಕೆಯಿದೆ. ಅದನ್ನೂ ಈಡೇರಿಸುತ್ತೇವೆ. ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವ ಬೇಡಿಕೆ ನಿಮ್ಮ ನಿಗಮ ಸ್ಥಾಪನೆಯಾದ್ರೆ ಕೊಡಬಹುದು. ಟ್ಯಾಕ್ಸಿ ಮಾಲೀಕರ ಸಂಘದ ಬೇಡಿಕೆಗಳನ್ನೂ ಮುಖ್ಯಮಂತ್ರಿಗಳ ಮುಂದಿಟ್ಟು ಪರಿಹಾರ ಒದಗಿಸುವ ಕೆಲಸ ಮಾಡ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.

ಸದ್ಯ ಓಲಾ, ಊಬರ್, ಬೈಕ್ ಟ್ಯಾಕ್ಸಿ ಬೇಡಿಕೆ ಕೋರ್ಟ್​​ನಲ್ಲಿದೆ. ನಾವು ಸೀನಿಯರ್ ಅಡ್ವೋಕೇಟ್ ನೇಮಿಸಿ ತೆರವು ಮಾಡುವ ಕೆಲಸ ಮಾಡ್ತೇವೆ. ಚಾಲಕರಿಗೆ ವಸತಿ ಯೋಜನೆ ಬೇಡಿಕೆ ಇದೆ ಜಮೀರ್ ಅಹಮದ್ ಅವರ ಜೊತೆ ಮಾತಾಡ್ತೆವೆ, ಚಾಲಕರ ಮಕ್ಕಳ ವಿಧ್ಯಾಭ್ಯಾಸಕ್ಕೆ 17 ಕೋಟಿ ರೂ. ಅನುದಾನ ಇಟ್ಟಿದ್ದೇವೆ, ಖಾಸಗಿ ವಾಹನಗಳನ್ನ ಕಿಮೀ ರೀತಿಯಲ್ಲಿ ತೆಗೆದುಕೊಳ್ಳೊ ಬೇಡಿಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.