ಸರ್ಕಾರಿ ನೌಕರ, ತೆರಿಗೆ ಪಾವತಿದಾರರ ಕಾರ್ಡ್ ಮಾತ್ರ ರದ್ದು: ಆಹಾರ ಇಲಾಖೆ ಮಾರ್ಗಸೂಚಿ.

40

ಬೆಂಗಳೂರು: ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನೂ ರದ್ದು ಮಾಡದಿರುವ ಬಗ್ಗೆ ಆಹಾರ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಆಹಾರ ಇಲಾಖೆ ಆಯುಕ್ತರು, ಆದ್ಯತಾ ಬಿಪಿಎಲ್ ಕಾರ್ಡ್ ಅನ್ನು ನೀಡಲು ಸರ್ಕಾರದಿಂದ ನಿಗದಿಪಡಿಸಿರುವ ಮಾನದಂಡಗಳನ್ನು ಪರಿಶೀಲಿಸಿ, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿತ್ತು. ಈ ಸಂಬಂಧ ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ, ಉಳಿದಂತೆ ತೆಗೆದುಕೊಂಡಿರುವ ಕ್ರಮಗಳನ್ನು ಮರುಸ್ತಾಪಿಸಲು ಕೂಡಲೇ ಕ್ರಮ ವಹಿಸಲು ಪತ್ರದಲ್ಲಿ ನಿರ್ದೇಶಿಸಲಾಗಿತ್ತು. ಇದೀಗ ಈ ಸಂಬಂಧ ಕೆಲ ಮಾರ್ಗಸೂಚಿಯನ್ನು ಇಲಾಖೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ಮರುಸ್ತಾಪನೆ ಕಾರ್ಯವನ್ನು ಮಾಡಲು ಆಹಾರ ತಂತ್ರಾಂಶದಲ್ಲಿ ಉಪ ನಿರ್ದೇಶಕರ ಲಾಗಿನ್‍ನಲ್ಲಿ ಅವಕಾಶ ನೀಡಲಾಗಿದೆ. ನೋಡಲ್ ಅಧಿಕಾರಿ ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ಪ್ರಗತಿಯನ್ನು ಖುದ್ದು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಲಾಗಿದೆ ಹೀಗೆ ಮರುಸ್ತಾಪನೆಗೊಂಡಿರುವ ಪಿಹೆಚ್‍ಹೆಚ್ ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಹಂಚಿಕೆಯನ್ನು ಎನ್‍ಐಸಿ ಸಹಯೋಗದೊಂದಿಗೆ ನವೆಂಬರ 25 ರೊಳಗೆ ಜಂಟಿ ನಿರ್ದೇಶಕರು ಕ್ರಮವಹಿಸಬೇಕು. ಕುಟುಂಬ ತಂತ್ರಾಂಶದಿಂದ ಬಂದಿರುವ ಆದಾಯ ತೆರಿಗೆ ಪಾವತಿದಾರರು ಪಡಿತರ ಚೀಟಿಗಳ ರದ್ದತಿಯಲ್ಲಿ ಕೇವಲ ಆದಾಯ ತೆರಿಗೆ ಪಾವತಿದಾರರ ಪಡಿತರ ಚೀಟಿಗಳನ್ನು ಮಾತ್ರವೇ ರದ್ದು ಮಾಡುವಂತೆ ಆಯಾ ಜಂಟಿ ಉಪ ನಿರ್ದೇಶಕರು ಕ್ರಮ ವಹಿಸಬೇಕು. ಇದಕ್ಕೆ ತಕ್ಕಂತೆ ಪೂರಕ ದಾಖಲೆಗಳನ್ನು ಪಡೆದು, ಪ್ರತಿಯೊಂದು ಪಡಿತರ ಚೀಟಿದಾರರ ದಾಖಲೆಗಳನ್ನು ಕಡತಗಳಲ್ಲಿ ಇರಿಸಬೇಕು ಎಂದು ತಿಳಿಸಲಾಗಿದೆ.