ಸರ್ವರ ಸಹಕಾರದಿಂದ ಜಾನಪದ ಸಮ್ಮೇಳನ ಸಂಘಟಿಸಲಾಗುವುದು : ಡಿ.ಎಸ್.ಸುರೇಶ್.

68
firstsuddi

ಚಿಕ್ಕಮಗಳೂರು : ವಿವಿಧ ಜಾನಪದ ಕಲೆಗಳನ್ನು ಒಳಗೊಂಡ ಜಾನಪದ ತಪೋವನವನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು.

ನಿನ್ನೆ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್, ತಾಲ್ಲೂಕು ಜಾನಪದ ಪರಿಷತ್ ವತಿಯಿಂದ ಏರ್ಪಡಿಸಿದ್ದ ತರೀಕೆರೆ ತಾಲ್ಲೂಕು ಜಾನಪದ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಾನಪದ ತಜ್ಞ ಡಾ|ಜವರೇಗೌಡ ಬದುಕು ಬರಹ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಮ್ಮೇಳನವನ್ನು ಆಯೋಜಿಸುವ ಹಿನ್ನಲೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ಪೂರ್ವಭಾವಿ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗುವುದು. ಸರ್ವರ ಸಹಕಾರದಿಂದ ಜಾನಪದ ಸಮ್ಮೇಳನ ಸಂಘಟಿಸಲಾಗುವುದು ಎಂದರು.

ತರೀಕೆರೆ ತಾಲ್ಲೂಕು ಮತ್ತು ಅಜ್ಜಂಪುರ ತಾಲ್ಲೂಕು ಜಾನಪದ ಕಲೆಗಳನ್ನು ಉಗಮವಾಗಿದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು. ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಶಿಕ್ಷಕರಾದ ಆರ್.ನಾಗೇಶ್ ಜಾನಪದ ಕಲೆಗಳಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ. ಶಿಕ್ಷಕ ಆರ್.ನಾಗೇಶ್ ಅವರಿಗೆ ಈ ಬಾರಿ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ನೀಡಲು ತಾವು ಸರ್ಕಾರದಲ್ಲಿ ಮಾತನಾಡಿ ಅವರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಕೊಡಿಸುವುದಾಗಿ ಭರವಸೆ ನೀಡಿದರು.

ಹಿರಿಯ ಪತ್ರಕರ್ತ, ತಾಲ್ಲೂಕು ಜಾನಪದ ಪರಿಷತ್ ಗೌರವ ಸಲಹೆಗಾರ ಎನ್.ರಾಜು ಮಾತನಾಡಿ, ತರೀಕೆರೆಯಲ್ಲಿ ಈ ಹಿಂದೆ ಜಾನಪದ ಸಾಹಿತ್ಯ ರತ್ನಕೆ.ಆರ್.ಲಿಂಗಪ್ಪ, ಗೊ.ರು. ಚನ್ನಬಸಪ್ಪ ಮತ್ತಿತ್ತರ ಮಹನೀಯರ ಪ್ರಯತ್ನದಿಂದ ಪ್ರಥಮ ಜಾನಪದ ಸಮ್ಮೇಳನ ನಡೆದಿತ್ತು. ಹೊನ್ನ ಬಿತ್ತೇವು ಹೊಲಕ್ಕೆಲ್ಲ ಗ್ರಂಥವನ್ನು ಪ್ರಕಾಶಿಸಲಾಗಿತ್ತು. ಅಂತಹ ದೊಡ್ಡ ಜಾನಪದ ಸಮ್ಮೇಳನ ತರೀಕೆರೆಯಲ್ಲಿ ಮತ್ತೆ ಆಗಬೇಕು.

ತರೀಕೆರೆ ಬಳಿ ವಿಶಾಲವಾದ ಸ್ಥಳದಲ್ಲಿ ಜಾನಪದ ವಿವಿಧ ಕಲೆಗಳನ್ನು ಒಳಗೊಂಡ ಜಾನಪದ ತಪೋವನ ನಿರ್ಮಾಣ ಆಗಬೇಕು. ಇದಕ್ಕೆ ಶಾಸಕ ಡಿ.ಎಸ್.ಸುರೇಶ್ ಸರ್ಕಾರದಿಂದ ಅನುದಾನ ಒದಗಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಸುರೇಶ್ ಮಾತನಾಡಿ, ತರೀಕೆರೆಯಲ್ಲಿ ಜಾನಪದ ಕಲೆಗಳು ಹೆಚ್ಚಾಗಿದ್ದು, ಶಾಶ್ವತವಾಗಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು. ಭಾರತೀಯ ಸಂಸ್ಕೃತಿಯ ಬೆನ್ನೆಲುಬು ಜಾನಪದ ಸಂಸ್ಕೃತಿಯಾಗಿದೆ. 434 ವಿವಿಧ ಜಾನಪದ ಕಲೆಗಳನ್ನು ಗುರುತಿಸಲಾಗಿದೆ ಎಂದರು.

ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಜಾನಪದ ತಜ್ಞ ಡಾ|ಬಸವರಾಜ ನೆಲ್ಲಿಸರ ಪ್ರಧಾನ ಉಪನ್ಯಾಸ ನೀಡಿದರು. ತರೀಕೆರೆ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಆರ್.ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಡಾ| ಮಾಳೇನಹಳ್ಳಿ ಬಸಪ್ಪ, ಶಿಗ್ಗಾಂವಿ ಜಾನಪದ ವಿವಿ ನಿಕಟಪೂರ್ವ ಕುಲಸಚಿವ ಪ್ರೊ.ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ವಸಂತಕುಮಾರ್ ಗುಳ್ಳದಮನೆ, ರಾ.ಸ.ನೌ.ಸಂಘದ ಅಧ್ಯಕ್ಷ ಸಿ.ಟಿ.ಯೋಗೀಶ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸಿ.ವಿ.ರವಿ ಮಾತನಾಡಿದರು.

ಜಾನಪದ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಟಿ.ಎಸ್.ಮೋಹನ್‍ಕುಮಾರ್ ಸ್ವಾಗತಿಸಿ, ಶಿವಕುಮಾರ್ ನಿರೂಪಿಸಿ, ಎಚ್.ಪಿ.ಮಲ್ಲಿಕಾರ್ಜುನ ವಂದಿಸಿದರು.