ಚಿಕ್ಕಮಗಳೂರು : ಸರ್.ಎಂ.ವಿಶ್ವೇಶ್ವರಯ್ಯನವರ ಆಶಯದಂತೆ ವಿಜ್ಞಾನದ ಆವಿಷ್ಕಾರಗಳು ಆಧುನಿಕ ತಂತ್ರಜ್ಞಾನ ಮತ್ತು ತಾಂತ್ರಿಕತೆಯ ಉಪಯೋಗ ಸಾಮಾನ್ಯ ಜನರಿಗೂ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನಗರದ ಲೋಕೋಪಯೋಗಿ ಇಲಾಖೆಯ ಕಚೇರಿ ಆವರಣದಲ್ಲಿ ಇಂದು ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನ, ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜ್ಞಾನದ ಆವಿಷ್ಕಾರಗಳು ಆಧುನಿಕ ತಂತ್ರಜ್ಞಾನಗಳು ಮತ್ತು ತಾಂತ್ರಿಕತೆಯ ಉಪಯೋಗ ಸಾಮಾನ್ಯ ಜನರಿಗೂ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರಕಬೇಕೆಂಬುದು ಸರ್.ಎಂ.ವಿಶ್ವೇಶ್ವರಯ್ಯನವರ ಆಶಯವಾಗಿತ್ತು. ಆ ಉದ್ದೇಶದಿಂದಲೇ ಅವರು ಕೃಷ್ಣರಾಜ ಸಾಗರ ಜಲಾಶಯ ಸೇರಿದಂತೆ ಅನೇಕ ಪ್ರಾಜೆಕ್ಟ್ಗಳನ್ನು ನಿರ್ಮಿಸಿದರು ಎಂದರು.
1917ನೇ ಇಸವಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭ ಮಾಡುವ ಮೂಲಕ ಸಾಕಷ್ಟು ಇಂಜಿನಿಯರ್ ಗಳು ಹೊರಬರುವುದಕ್ಕೆ ಕಾರಣರಾದರು. ಅವರು ಹಾಕಿಕೊಟ್ಟ ಮಾರ್ಗದಿಂದಾಗಿ ಇಂದು ರಾಜ್ಯದಲ್ಲಿ ಅನೇಕ ಇಂಜಿನಿಯರಿಂಗ್ ಕಾಲೇಜುಗಳು ಆರಂಭವಾಗಿವೆ ಎಂದು ತಿಳಿಸಿದರು.
ಭಾರತ ಇಂಜಿನಿಯರ್ಸ್ ಕಂಟ್ರಿ ಎಂದು ಪ್ರಪಂಚದಲ್ಲಿ ಖ್ಯಾತಿ ಪಡೆದಿರುವುದಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರು ಮೂಲ ಕಾರಣ. ಅವರು ಹಾಕಿಕೊಟ್ಟ ತಾಂತ್ರಿಕ ಪರಿಣತಿಯಿಂದಾಗಿ ಇಂದು ಅಮೆರಿಕಾ, ಯೂರೋಪ್ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಭಾರತೀಯ ಇಂಜಿನಿಯರ್ ಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯನವರು ಹಾಕಿಕೊಟ್ಟ ಹಾದಿಯಲ್ಲಿ ಇಂದಿನ ಇಂಜಿನಿಯರ್ ಗಳು ಸಾಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಸಿ.ಪಿ.ಸುರೇಶ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭಕ್ಕೆ ಮುನ್ನ ಸಿವಿಲ್ ಇಂಜಿನಿಯರ್ಗಳು ಸಂಘದ ನೇತೃತ್ವದಲ್ಲಿ ನಗರದ ಪಾಲಿಟೆಕ್ನಿಕ್ ಆವರಣದಿಂದ ಲೋಕೋಪಯೋಗಿ ಇಲಾಖೆ ಕಚೇರಿಯವರೆಗೆ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು.
ಲೋಕೋಪಯೋಗಿ ಇಲಾಖೆ ಕಚೇರಿಯ ಆವರಣದಲ್ಲಿರುವ ಸರ್.ಎಂ.ವಿಶ್ವೇಶ್ವಯ್ಯನವರ ಪುತ್ಥಳಿಗೆ ಜಿಲ್ಲಾಧಿಕಾರಿ, ಸಂಘದ ಪದಾಧಿಕಾರಿಗಳು ಸೇರಿದಂತೆ ಗಣ್ಯರು ಮಾರ್ಲಾಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಸಾರ್ವಜನಿಕರಿಗೆ ಸಹಿ ವಿತರಿಸಲಾಯಿತು. ನಗರಸಭೆ ಆಯುಕ್ತ ಬಸವರಾಜ್, ಪಿಡಬ್ಯೂಡಿ ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್, ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ವಿ.ಟಿ. ಲಿಂಗರಾಜು, ಸಹ ಸಂಯೋಜಕ ಕೆ.ಎಸ್.ಸತೀಶ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಖಜಾಂಚಿ ನಾಗೇಂದ್ರ ಪ್ರಸಾದ್ ಹಾಜರಿದ್ದರು.










