ಸಲೀಂ – ಉಗ್ರಪ್ಪ ಸಂಭಾಷಣೆ ಕುರಿತಂತೆ ಡಿಕೆಶಿ ಪ್ರತಿಕ್ರಿಯೆ ಏನು?

73
firstsuddi

ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ನಿನ್ನೆ ನಡೆದ ಮಾಧ್ಯಮಗೋಷ್ಠಿ ಸಂದರ್ಭ ನಡೆದ ಸಂಭಾಷಣೆಯನ್ನು ನಾನು ಅಲ್ಲಗಳೆಯುವುದಿಲ್ಲ. ಉಗ್ರಪ್ಪ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ ಎಂದರು.

ನಾನು ಮೀಡಿಯಾ ತಪ್ಪು ಅಂತ ಯಾಕೆ ಹೇಳಲಿ. ನಾವು ಮಾತಾಡಿದ್ದನ್ನು ನೀವು ತೋರಿಸಿದ್ದೀರಿ. ಈ ಹಿಂದೆ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಮಾತಾಡಿದ್ರು, ತೋರಿಸಿದ್ದೀರಿ. ಇದೀಗ ಇವರು ಮಾತಾಡಿದ್ದಾರೆ ನೀವು ತೋರಿಸಿದ್ದೀರಿ. ಆದರೆ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಯಾವುದೇ ಪರ್ಸೆಂಟೇಜ್ ವಿಚಾರದಲ್ಲಿಯೂ ಭಾಗಿಯಾಗಿಲ್ಲ, ನನಗೆ ಅದರ ಅಗತ್ಯವೂ ಇಲ್ಲ. ದೂರು ಕೊಟ್ಟರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಬೇಕಿದ್ದರೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಿ ಎಂದು ಹೇಳಿದರು. ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯೋರು, ಮೊಟ್ಟೆ ಎಸೆಯೋರು, ಚಪ್ಪಲಿ ಎಸೆಯೋರು, ಜಯಕಾರ ಹಾಕೋರು ಇರ್ತಾರೆ. ನಾನು ಯಾರ ಬಗ್ಗೆ ಹೇಳ್ತಿದ್ದೇನೆ ಅನ್ನೋದನ್ನು ನೀವೇ ತೀರ್ಮಾನ ಮಾಡಿ. ಪಕ್ಷ ಶಿಸ್ತನ್ನು ಬಹಳ ಗಮನದಲ್ಲಿಟ್ಟುಕೊಂಡು ಶಿಸ್ತು ಪಾಲನಾ ಕಮಿಟಿ ಏನು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಒಬ್ಬ ಮಂತ್ರಿ ಭ್ರಷ್ಟಾಚಾರದ ವಿಚಾರವಾಗಿ ಬೆಡ್ ರೂಂನಲ್ಲಿ ಆಡಿದ ಮಾತನ್ನು ಮಾಧ್ಯಮಗಳೇ ಪ್ರಶ್ನಿಸಲಿಲ್ಲ. ಆದರೆ, ಇದನ್ನು ಯಾಕೆ ದೊಡ್ಡ ವಿಷಯ ಮಾಡುತ್ತೀರಿ. ನಾನು ಹಳ್ಳಿಯಿಂದ ಬಂದಿರುವವನು. ನನ್ನತನ ಹಾಗೂ ನನ್ನ ಶೈಲಿ ಇದೆ. ನನ್ನದೇ ಆದ ಯಶಸ್ಸು ಇದೆ. ಅದನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಜನತೆ ಹಾಗೂ ಅವರು ನೀಡುವ ಮತವೇ ನನ್ನ ತಕ್ಕಡಿ. ನಿಜವಾದ ತಕ್ಕಡಿ ಹಿಡಿಯುವವರು ಜನ ಎಂದು ಹೇಳಿದರು. ಬಿಜೆಪಿ ಬದುಕಿರುವುದೇ ಭ್ರಷ್ಟಾಚಾರ ಹಾಗೂ ಸುಳ್ಳು ಹೇಳುವ ಮೂಲಕ ಎಂದು ಡಿ ಕೆ ಶಿವಕುಮಾರ್ ಅವರು ಆರೋಪ ಮಾಡಿದ್ದಾರೆ.