ಸಾಕು ನಾಯಿಯ ವಿಚಾರವಾಗಿ ಜಗಳ- ಇಬ್ಬರ ಕೊಲೆಯಲ್ಲಿ ಅಂತ್ಯ…

57
firstsuddi

ಭೋಪಾಲ್: ಸಾಕು ನಾಯಿಯ ವಿಚಾರವಾಗಿ ಎರಡು ಮನೆ ಮಾಲೀಕರ ನಡುವೆ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಇಬ್ಬರನ್ನು ಗುಂಡಿಕ್ಕಿ ಕೊಂದ ಆರೋಪಿಯನ್ನು ರಾಜಪಾಲ್ ಸಿಂಗ್ ರಾಜಾವತ್ ಎಂದು ಗುರುತಿಸಲಾಗಿದ್ದು, ಈತ ಬ್ಯಾಂಕ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತ ನಿನ್ನೆ ರಾತ್ರಿ ತನ್ನ ಮನೆಯ ಬಾಲ್ಕನಿಯಿಂದ ಅಕ್ಕ ಪಕ್ಕದ ಮನೆಯವರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.

ರಾಜಾವತ್ ಮತ್ತು ಅವರ ಪಕ್ಕದ ಮನೆಯವರಾದ ವಿಮಲ್ ಅಚಲ (35) ಅವರು ರಾತ್ರಿ 11 ಗಂಟೆಗೆ ಕೃಷ್ಣಾ ಬಾಗ್ ಕಾಲೋನಿಯ ಕಿರಿದಾದ ಲೇನ್‍ನಲ್ಲಿ ತಮ್ಮ ನಾಯಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎರಡೂ ನಾಯಿಗಳು ಜಗಳ ಮಾಡಿಕೊಂಡವು. ಈ ವೇಳೆ ನಾಯಿಗಳ ಮಾಲೀಕರ ನಡುವೆಯೂ ವಾಗ್ವಾದ ನಡೆಯಿತು. ಇದೇ ಸಿಟ್ಟಿನಿಂದ ಬಂದ ರಾಜಾವತ್, ತನ್ನ 12-ಬೋರ್ ರೈಫಲ್‍ನೊಂದಿಗೆ ಮನೆಯ ಬಾಲ್ಕನಿಯ ಮೇಲೇರಿದ್ದಾನೆ. ನಂತರ ಅಲ್ಲಿಂದಲೇ ಶೂಟೌಟ್ ಮಾಡಿದ್ದಾನೆ.

ಮೃತ ಅಚಲಾ ನಗರದ ನಿಪಾನಿಯಾ ಪ್ರದೇಶದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ. ಇನ್ನೊಬ್ಬನನ್ನು ರಾಹುಲ್ ವರ್ಮಾ (27) ಎಂದು ಗುರುತಿಸಲಾಗಿದೆ. ಶೂಟೌಟ್ ಆದ ತಕ್ಷಣವೇ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಾವತ್ ಅವರ ಪುತ್ರ ಸುಧೀರ್ ಮತ್ತು ಇನ್ನೊಬ್ಬ ಸಂಬಂಧಿ ಶುಭಂ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ವಾಲಿಯರ್ ಮೂಲದ ರಾಜಾವತ್ ಅವರು ಪರವಾನಗಿ ಪಡೆದ 12-ಬೋರ್ ರೈಫಲ್ ಅನ್ನು ಹೊಂದಿದ್ದರಿಂದ ಇಂದೋರ್‌ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.