ಸಾರಿಗೆ ಇಲಾಖೆಗೆ 634 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿ ಗ್ರೀನ್ ಸಿಗ್ನಲ್…

279
firstsuddi

ಬೆಂಗಳೂರು : ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಾರಿಗೆ ಸಂಸ್ಥೆಗಳ ಸಿಬ್ಬಂಧಿಗಳಿಗೆ 3 ತಿಂಗಳುಗಳ ವೇತನಗಳ ಮೊತ್ತ 634 ಕೋಟಿ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ಈ 3 ತಿಂಗಳುಗಳ ಸಂಬಳದ ಮೊತ್ತವಾದ 634 ಕೋಟಿ 50 ಲಕ್ಷ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರಿಂದಾಗಿ ಸಾರಿಗೆ ಸಿಬ್ಬಂದಿಗಳ ಒಟ್ಟು ಮೂರು ತಿಂಗಳುಗಳ ಶೇ. 75 ರಷ್ಟು ವೇತನದ ಮೊತ್ತ 634.50 ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಂಡಂತಾಗಿದೆ. ಉಳಿದ ಶೇ. 25 ರಷ್ಟು ವೇತನಗಳನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಲಿವೆ.
ಇದರಿಂದಾಗಿ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳ ಸುಮಾರು 1,30,000 ಸಿಬ್ಬಂದಿಗಳಿಗೆ ವೇತನ ಪಾವತಿಗೆ ಸಾಧ್ಯವಾದಂತಾಗಿದೆ.