ಸಾರಿಗೆ ನೌಕರರಿಗೆ ನಗದು ರಹಿತ ವೈದ್ಯಕೀಯ ಸೇವೆ.

29

ಬೆಂಗಳೂರು: ಸಾರಿಗೆ ನೌಕರರಿಗೆ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಯೋಜನೆಗೆ ರಾಜ್ಯ ಸರ್ಕಾರ ಜನವರಿ ಮೊದಲ ವಾರದಲ್ಲಿ ಚಾಲನೆ ನೀಡಲಿದೆ. ಈ ಮೊದಲು ನೌಕರರು ಚಿಕಿತ್ಸೆಗೆ ಮೊದಲು ಹಣವನ್ನು ಪಾವತಿ ಮಾಡಬೇಕಿತ್ತು. ಬಳಿಕ ಹಣವನ್ನು ಮರುಪಾವತಿ ಮಾಡಲಾಗುತ್ತಿತ್ತು. ಈ ಯೋಜನೆಯಡಿ, ಚಾಲಕರು ಮತ್ತು ಕಂಡಕ್ಟರ್‌ಗಳು ಮತ್ತು ಅವರ ಕುಟುಂಬದ ಸದಸ್ಯರು ರಾಜ್ಯದಾದ್ಯಂತ 240 ಆಸ್ಪತ್ರೆಗಳಲ್ಲಿ ಹಣ ರಹಿತ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಗೊತ್ತುಪಡಿಸಿದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಡ್ ಮೂಲಕ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವಂತೆ ಮನವಿಗಳು ಬಂದಿದ್ದವು. ಹೀಗಾಗಿ ಸರ್ಕಾರ ಸಾರಿಗೆ ನೌಕರರ ಅನುಕೂಲಕ್ಕಾಗಿ ಹಲವು ಹೊಸ ಉಪಕ್ರಮಗಳನ್ನು ಪರಿಚಯ ಮಾಡುತ್ತಿವೆ. ಈ ಯೋಜನೆಯಲ್ಲಿ ನೌಕರರಿಗೆ ಕಾರ್ಡ್ ಅನ್ನು ನೀಡಲಾಗುವುದು, ಕಾರ್ಡ್ ಮೂಲಕ ರಾಜ್ಯದಾದ್ಯಂತ 240 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಹಣವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದರು. ಈ ಯೋಜನೆಯನ್ನು ಮೊದಲು ಕೆಎಸ್‍ಆರ್‍ಟಿಸಿ ನೌಕರರಿಗೆ ಒದಗಿಸಲಾಗುವುದು. ಬಳಿಕ ಕೆಕೆಆರ್‍ಟಿಸಿ, ಬಿಎಂಟಿಸಿ ಮತ್ತು ಎನ್‍ಡಬ್ಲ್ಯುಕೆಆರ್‍ಟಿಸಿ ಗೂ ಈ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.