ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಬಗ್ಗೆ ನಿಂದನೆ ಮಾಡಿದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ಜಯಕುಮಾರ್ ನಾಯರ್ ಅವರು ತಮ್ಮ ವಿರುದ್ಧ ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣ ರದ್ದುಪಡಿಸಬೇಕೆಂದು ಕೋರಿ ಮಂಗಳೂರಿನ ರಿತೇಶ್ ಪಯಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಕಟ್ಟಡದ ನೆಲಮಹಡಿಯು ಸಾರ್ವಜನಿಕ ಸ್ಥಳವಾಗಿರುವುದಿಲ್ಲ, ನೆಲಮಹಡಿಯನ್ನು ಸಾರ್ವಜನಿಕರು ಯಾರೂ ಹೆಚ್ಚಾಗಿ ವೀಕ್ಷಿಸಿವುದಿಲ್ಲ. ಹಾಗಾಗಿ, ಅಲ್ಲಿಂದ ಬಯ್ಯುವುದು ಅಥವಾ ನಿಂದನೆ ಮಾಡಿದರೆ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೆ. 3(1)(ಆರ್)(ಎಸ್)(ವಿಎ) ಅನ್ವಯವಾಗುವುದಿಲ್ಲ ಎಂದು ಅಭಿಪ್ರಾಯಿಸಿ ರಿತೇಶ್ ಪಯಾಸ್ ವಿರುದ್ಧ ದಾಖಲಿಸಿದ್ದ ಮೊಕದ್ದಮೆ ರದ್ದುಪಡಿಸಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಿತೇಶ್ ಪಯಾಸ್ ಮತ್ತು ಜಯಕುಮಾರ್ ನಾಯರ್ ನಡುವೆ ವ್ಯಾಜ್ಯ ನಡೆಯುತ್ತಿತ್ತು. ಎರಡು ವರ್ಷಗಳ ಹಿಂದೆ ಕಟ್ಟಡದ ನೆಲಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೋಹನ್ ಎನ್ನುವರು ತಮ್ಮನ್ನು ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಜಯಕುಮಾರ್ ನಾಯರ್ ಅಟ್ರಾಸಿಟಿ ಕಾಯ್ದೆಯಡಿ ದೂರು ನೀಡಿದ್ದರು.










