ಸಿಎಂ ಬದಲಾವಣೆ ವಿಚಾರದಲ್ಲಿ ಸತ್ಯಾಂಶ ಇಲ್ಲ, ಈ ಬಗ್ಗೆ ಯಾರೂ ಚರ್ಚೆ ಮಾಡಬಾರದು : ಬಿಎಸ್‍ವೈ.

61
firstsuddi

ಬೆಂಗಳೂರು : ಸಿಎಂ ಬದಲಾವಣೆ ವಿಚಾರದಲ್ಲಿ ಸತ್ಯಾಂಶ ಇಲ್ಲ. ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಯಾರೊಬ್ಬರು ಅದರ ಬಗ್ಗೆ ಚರ್ಚೆ ಮಾಡಬಾರದು, ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಮಂತ್ರಾಲಯಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ 7-8 ತಿಂಗಳು ಇರುವಾಗ ಬದಲಾವಣೆ ಪ್ರಶ್ನೆ ಬರುವುದಿಲ್ಲ. ಮುಖ್ಯಮಂತ್ರಿಗಳಾಗಿ ಬೊಮ್ಮಾಯಿ ಅವರೇ ಮುಂದುವರೆಯುತ್ತಾರೆ. ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗ್ತಿದ್ದೇವೆ. ಬಹಳ ದಿನಗಳು ಆಯ್ತು ರಾಯರ ದರ್ಶನ ಮಾಡಿ. ನಾಳೆ ಮಂತ್ರಾಲಯ ಪ್ರವಾಸ ಮುಗಿಸಿ ವಾಪಸ್ ಬರುತ್ತೇನೆ. ಮಂತ್ರಾಲಯದಿಂದ ಬಂದ ನಂತರ ರಾಜ್ಯ ಪ್ರವಾಸ ಮಾಡ್ತೀನಿ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬಾರದ ರೀತಿ ನಾವು ನೋಡಿಕೊಳ್ತೇವೆ ಎಂದರು.

ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದರು ಅಷ್ಟೇ. ಆದರೆ, ನಾಯಕತ್ವದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಆಗುತ್ತದೆ. ಇದಕ್ಕೆ ಹೈಕಮಾಂಡ್ ನಾಯಕರು ಕೂಡ ಸಹಕಾರ ಕೊಡುತ್ತಾರೆ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.

ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ನಾನು ಬಹಿರಂಗವಾಗಿ ಹೇಳಿದ್ದೇನೆ. ಆದರೆ, ಅಂತಿಮವಾಗಿ ಅವರ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್. ಅವರು ಶಿಕಾರಿಪುರದಿಂದ ಸ್ಪರ್ಧೆ ಮಾಡುವ ಬಗ್ಗೆ ಅಮಿತ್ ಶಾ ಜೊತೆ ನಾನು ಏನೂ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.