ಬೆಂಗಳೂರು : ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಮಧ್ಯಂತರ ಚುನಾವಣೆ ಬರಬಹುದು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಯಿಸಿದ್ದು, ಸಿದ್ದರಾಮಯ್ಯ ಅವರು ಭವಿಷ್ಯ ಹೇಳುವುದನ್ನು ಯಾವಾಗಿನಿಂದ ಶುರು ಮಾಡಿದ್ದಾರೋ ನಮಗೆ ಗೊತ್ತಿಲ್ಲ. ನಮ್ಮ ಸರ್ಕಾರ ಇನ್ನೂ 3 ವರ್ಷ 9ತಿಂಗಳು ಇದ್ದೇ ಇರುತ್ತದೆ. ದೀರ್ಘಾವಧಿಯ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಇದರ ಬಗ್ಗೆ ಅನುಮಾನ ಬೇಡ. ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕರು ಎಂದು ತಿಳಿದಿದ್ದೆ. ಆದರೆ ಅವರ ಪಕ್ಷದಲ್ಲಿ ಇನ್ನು ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಿಲ್ಲ. ಸಿದ್ದರಾಮಯ್ಯ ಅವರ ಕಾಲು ಎಳೆಯುವ ಕೆಲಸ ಅವರ ಪಕ್ಷದಲ್ಲೇ ನಡೆಯುತ್ತಿದೆ. ಅವರು ಕಾಲು ಜಾರದೆ ಎಚ್ಚರದಿಂದ ಇರಲಿ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ಈ ವೇಳೆ ಸಿಎಂ ಯಡಿಯೂರಪ್ಪ ಅವರು ಮೂಡಿಗೆರೆ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಟಾಚಾರದ ಭೇಟಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಎಂ ಅವರು ಚಿಕ್ಕಮಗಳೂರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಟಾಚಾರದ ಭೇಟಿ ನೀಡಿದ್ದಾರೆ ಎನ್ನುವುದು ಸುಳ್ಳು. ವಾತಾವರಣದ ಕಾರಣ ಹೆಲಿಕಾಪ್ಟರ್ ಲ್ಯಾಂಡ್ ಆಗಲು ತಡವಾಯಿತು. ಮೂಡಿಗೆರೆ ಮಲೆಮನೆ ಗ್ರಾಮದ ಸ್ಥಿತಿಯನ್ನು ನೋಡಿದ್ದಾರೆ. ಅನ್ನ ಬೆಂದಿದೆಯೋ ಎಂದು ತಿಳಿಯಲು ಎಲ್ಲಾ ಅಕ್ಕಿಯನ್ನು ಮುಟ್ಟಿ ನೋಡುವ ಅವಶ್ಯಕತೆ ಇಲ್ಲ. ಇನ್ನುಳಿದ ಪ್ರವಾಹ ಪ್ರದೇಶಗಳ ವೀಡಿಯೋವನ್ನು ತೋರಿಸುತ್ತೇವೆ. ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಸಭೆ ನಡೆಯಲಿದೆ ಎಂದು ತಿಳಿಸಿದರು.










