ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಿಡಿ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ನಿನ್ನೆ ಸಂತ್ರಸ್ತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಪ್ರಕರಣದ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಕೋರಿಕೆ ಮೇರೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಆರೋಪಿ ಕೋರಿಕೆಯಂತೆ ಎಸ್ಐಟಿ ರಚಿಸಿರುವ ಕ್ರಮವೇ ಅಸಿಂಧು. ಇಂತಹ ವಿಶೇಷ ತನಿಖಾ ದಳದ ಮುಖ್ಯಸ್ಥರಾಗಿದ್ದ ಸೌಮೇಂದು ಮುಖರ್ಜಿ ವರದಿಗೆ ಸಹಿಯನ್ನೇ ಹಾಕಿರಲಿಲ್ಲ. ಎಸ್ ಐಟಿ ರಚನೆ ಸಿಂಧುತ್ವವನ್ನು ಪ್ರಶ್ನಿಸಿದ್ದರಿಂದಲೇ ಹೈಕೋರ್ಟ್ ಮೊದಲಿಗೆ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ತಡೆ ನೀಡಿತ್ತು. ಆದರೆ, ಇದೀಗ ಎಸ್ ಐಟಿಯ ತನಿಖಾ ವರದಿಯನ್ನು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಿದೆ.
ಒಂದು ವೇಳೆ ಎಸ್ಐಟಿಯು ರಚಿಸಿರುವ ಕ್ರಮವೇ ಅಸಿಂಧುವಾದರೆ ತನಿಖಾ ವರದಿಯೂ ಅಸಿಂಧುಗೊಳ್ಳುತ್ತದೆ. ಇಂತಹ ವರದಿಯನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸುವುದು ಸೂಕ್ತವಲ್ಲ. ಆದ್ದರಿಂದ, ಎಸ್ಐಟಿ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ನೀಡಿರುವ ಮಧ್ಯಂತರ ಆದೇಶಕ್ಕೆ ತಡೆ ನೀಡಬೇಕು ಎಂದು ಯುವತಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಕೆಲದಿನಗಳ ಹಿಂದೆ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಎಸ್ ಐಟಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಎಸ್ ಐಟಿ ಕ್ಲೀನ್ ಚಿಟ್ ಕೊಟ್ಟಿದೆ.










