ಬೆಂಗಳೂರು : ‘ಸಿದ್ದು ನಿಜ ಕನಸುಗಳು’ ಎಂಬ ಶೀರ್ಷಿಕೆಯಡಿ ಬಿಜೆಪಿ ಇಂದು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಆದರೆ ಪುಸ್ತಕ ಬಿಡುಗಡೆಗೆ ತಡೆ ಕೋರಿ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿರುವ ಸೂರ್ಯ ಮುಕುಂದರಾಜ್ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಇಂದು ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪುರಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರೂಪಗೊಳಿಸಿದ ಭಾವಚಿತ್ರವನ್ನು ಬಳಸಿ ‘ಸಿದ್ದು ನಿಜ ಕನಸುಗಳು’ ಎಂಬ ಶೀರ್ಷಿಕೆಯಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸದರಿ ಕಾರ್ಯಕ್ರಮಕ್ಕೆ ಸಚಿವರಾದ ಅಶ್ವತ್ಥ್ ನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಪಠ್ಯ ಪುಸ್ತಕ ಪುನರ್ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದ ವಿವಾದಾತ್ಮಕ ವ್ಯಕ್ತಿ ರೋಹಿತ್ ಚಕ್ರತೀರ್ಥ ಹಾಗೂ ಇತರ ವ್ಯಕ್ತಿಗಳು ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆಹ್ವಾನ ಪತ್ರಿಕೆಯಲ್ಲಿ ಪುಸ್ತಕದ ಮುಖಪುಟ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರ ಕುರಿತು ಅವಹೇಳನಕಾರಿ, ಕಪೋಕಲ್ಪಿತ, ಪ್ರಚೋದನಕಾರಿ ಲೇಖನಗಳನ್ನು ಒಳಗೊಂಡಿರುವುದು ಎಂದು ಸ್ಪಷ್ಟವಾಗಿದೆ. ಆಹ್ವಾನ ಪತ್ರಿಕೆಯಲ್ಲಿರುವ ಅತಿಥಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಚಾರಗಳನ್ನು ಮತ್ತು ಒಂದು ಸಮುದಾದಯದ ವಿರುದ್ಧ ಪ್ರಚೋದನೆ ನೀಡುವ ಬರಹಗಳನ್ನು ಪ್ರಕಟಿಸುವ ಮೂಲಕ ವಿವಾದಗಳನ್ನು ಸೃಷ್ಟಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ.
ಸಿದ್ದರಾಮಯ್ಯ ಅವರ ಭಾವಚಿತ್ರ ವಿರೂಪಗೊಳಿಸಿ ಸಾಮರಸ್ಯ ಕದಡುವ ಹುನ್ನಾರ ಹೊಂದಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೆ ರದ್ದು ಮಾಡಬೇಕು. ಆಯೋಜಕರಿಗೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕಾರ್ಯಕ್ರಮವನ್ನ ರದ್ದು ಮಾಡಲು ಸೂಚನೆ ನೀಡಿ ಕ್ರಮ ಜರುಗಿಸಬೇಕು ಎಂದು ಸೂರ್ಯ ಮುಕುಂದರಾಜ್ ಮನವಿ ಮಾಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಟಿಪ್ಪು ನಿಜ ಕನಸು ಎಂಬ ಪುಸ್ತಕ ಹಾಗೂ ನಾಟಕ ಬಿಡುಗಡೆಯಾಗಿತ್ತು. ಟಿಪ್ಪುವಿನ ಹಿಂದೂ ದ್ವೇಷವೇ ಪುಸ್ತಕದ ಕಥಾ ವಸ್ತುವಾಗಿತ್ತು. ಇದೀಗ ಅದೇ ತರ ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಸಿದ್ದು ನಿಜ ಕನಸು ಹೆಸರಿನಲ್ಲಿ ಪುಸ್ತಕ ಸಿದ್ಧಪಡಿಸಲಾಗಿದ್ದು. ಇಂದು ಬೆಂಗಳೂರಿನ ಪುರಭವನದಲ್ಲಿ ಸಿದ್ದು ನಿಜ ಕನಸು ಪುಸ್ತಕವನ್ನು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ್ ನಾರಾಯಣ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಹಿಂದೂ ಸಮಾಜವನ್ನ ನಡೆಸಿಕೊಂಡ ರೀತಿಯನ್ನೇ ಹೈಲೈಟ್ ಮಾಡಿ ಪುಸ್ತಕ ಬರೆದಿರುವ ನಿರೀಕ್ಷೆ ಇದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಗಲಾಟೆ ಸೃಷ್ಠಿ ಮಾಡುವ ಸಾಧ್ಯತೆ ಇದೆ.










