ಸಿಪಿ ಯೋಗೇಶ್ವರ ಬಾವ ನಾಪತ್ತೆ ಪ್ರಕರಣ: ಮಹದೇವಯ್ಯ ಕಾರು ರಾಮಾಪುರದಲ್ಲಿ ಪತ್ತೆ…

43
firstsuddi

ರಾಮನಗರ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರ ಬಾವ ಮಹದೇವಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮ ಬಳಿ ಪತ್ತೆಯಾಗಿದೆ.

ಕಾರಿನ ಟೈ ಲ್ಯಾಂಪ್ ಬಳಿ ರಕ್ತದ ಕಲೆ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಫಾರೆನ್ಸಿಕ್ ಹಾಗೂ ರಾಮನಗರ ಪೊಲೀಸ್ ತನಿಖಾ ತಂಡ ದೌಡಾಯಿಸಿ ಪರಿಶೀಲನೆ ನಡೆಸಿದೆ.

ಡಿಸೆಂಬರ್ 1 ಶುಕ್ರವಾರ ತಡರಾತ್ರಿಯಿಂದ ಮಹದೇವಯ್ಯ ನಾಪತ್ತೆಯಾಗಿದ್ದಾರೆ. ಅವರ ಬ್ರೀಜ್ಜಾ ಕಾರು ಕೂಡಾ ಅಂದು ನಾಪತ್ತೆ ಆಗಿತ್ತು. ಇದೀಗ ಕಾರು ಪತ್ತೆಯಾಗಿದ್ದು, ಮಹದೇವಯ್ಯ ಸುಳಿವು ಮಾತ್ರ ದೊರೆತಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ ಕೋರ್ಟ್‌ನಲ್ಲಿ ಹಲವು ಜಮೀನು ವ್ಯಾಜ್ಯ ನಡೆಸುತ್ತಿದ್ದರು. ಮಹದೇವಯ್ಯ ನಾಪತ್ತೆ ಹಿಂದೆ ಹಲವು ಅನುಮಾನ ಹುಟ್ಟಿಕೊಂಡಿದೆ. ಜಮೀನಿನ ವಿಚಾರಕ್ಕೆ ಮಹದೇವಯ್ಯ ಕಿಡ್ನಾಪ್ ಆಗಿರುವ ಶಂಕೆಯಿದೆ.

ಇದೀಗ ರಾಮಾಪುರದಲ್ಲಿ ಪತ್ತೆಯಾಗಿರುವ ಕಾರನ್ನು ಫಾರೆನ್ಸಿಕ್ ಟೀಂ ಪರಿಶೀಲನೆ ನಡೆಸಿದೆ. ರಾಮನಗರದ ಪೊಲೀಸ್ ತನಿಖಾ ಟೀಂನಿಂದಲೂ ಕಾರಿನ ಪರಿಶೀಲನೆ ನಡೆದಿದೆ. ಸದ್ಯ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕಾರನ್ನು ಇರಿಸಲಾಗಿದೆ. ತನಿಖಾ ತಂಡ ನಿನ್ನೆ ತಡರಾತ್ರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ.

ಮಹದೇವಯ್ಯ ಅನುಮಾನಾಸ್ಪದ ನಾಪತ್ತೆ ಪ್ರಕರಣ ಪೊಲೀಸರಿಗೆ ತಲೆನೋವೆನಿಸಿಕೊಂಡಿದೆ. 4 ವಿಶೇಷ ತಂಡಗಳಿಂದ ಮಹದೇವಯ್ಯಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಮೊನ್ನೆ ಅನಾಮಿಕ ವ್ಯಕ್ತಿಯಿಂದ ಮಹದೇವಯ್ಯ ಫೋನ್ ರಿಸೀವ್ ಆಗಿತ್ತು. ಇದೀಗ ಅವರ ಫೋನ್ ಕಂಪ್ಲೀಟ್ ಸ್ವಿಚ್ ಆಫ್ ಆಗಿದೆ.