ಸಿಮ್​ ಕಾರ್ಡ್ ಇಲ್ಲದ ಮೊಬೈಲ್​ ಕೊಟ್ಟು ಹೆತ್ತ ತಾಯಿಯನ್ನೇ ಬಿಟ್ಟು ಹೋದ ಮಗ!

128
firstsuddi

ಕೊಪ್ಪಳ : ಎರಡು ದಿನದ ಹಿಂದೆ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ತಾಯಿಯೊಂದಿಗೆ ಬಂದಿದ್ದ ಪುತ್ರನೋರ್ವ ಆಕೆಯನ್ನು ದೇವಸ್ಥಾನದ ಆವರಣದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಜರುಗಿದೆ.

ಎರಡು ದಿನದ ಹಿಂದೆ ಇಲ್ಲಿಗೆ ಕರೆತಂದ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ಇಲ್ಲಿಂದ ತೆರಳಿದ್ದಾನೆ ಎನ್ನಲಾಗಿದೆ. ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಸ್ಥಳೀಯರು ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಜ್ಜಿಯನ್ನು ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ವೃದ್ಧೆ ತನ್ನ ಹೆಸರು ಖಾಸೀಂ ಬಿ, ತನ್ನದು ಉಜ್ಜಯಿನಿ ಗ್ರಾಮ ಎಂದು ಹೇಳಿಕೊಂಡಿದ್ದಾರೆ. ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ. ಅಜ್ಜಿಯಿಂದ ಹೆಚ್ಚಿನ ವಿವರಗಳಾಗಲಿ ಅಥವಾ ದಾಖಲೆಗಳಾಗಲಿ ದೊರಕಿಲ್ಲ. ಆದರೆ ವೃದ್ಧೆಗೆ ಸುಮಾರು 80 ವರ್ಷ ವಯಸ್ಸಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.