ಮಂಡ್ಯ : ಸಂಸದೆ ಸುಮಲತಾ ಸುತ್ತ ಗೂಂಡಾಗಳು, ಫ್ರಾಡ್ ಗಳಿದ್ದಾರೆ ಎಂದು ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಲತಾ ಅವರ ಅಟೆಂಡರ್ ಒಬ್ಬ ನಯವಂಚಕ. ಮೆಡಿಕಲ್ ಸೀಟು ಕೊಡಿಸುತ್ತೇನೆಂದು ಹೇಳಿ ವಂಚನೆ ಎಸಗುತ್ತಿದ್ದಾನೆ. ಅಂತವನನ್ನು ಸುಮಲತಾ ಅವರು ಆಪ್ತ ಸಹಾಯಕನೆಂದು ಇರಿಸಿಕೊಂಡಿದ್ದಾರೆ. ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಕೂಡ ಅಧಿಕಾರಿಗಳಿಗೆ ಹಿಂಸೆ ನೀಡುತ್ತಿದ್ದಾರೆ. ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್, ಸೂಪರಿಂಟೆಂಡೆಂಟ್ ಗಳನ್ನು ದಬಾಯಿಸಿ ಮಾತನಾಡುತ್ತಿದ್ದಾರೆ. ಒತ್ತಡ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಮಲತಾ ಅವರ ಅಧಿಕಾರ ದುರುಪಯೋಗವಾಗುತ್ತಿದೆ. ಅವರ ಲೆಟರ್ ಹೆಡ್ ಗಳನ್ನು ಬಳಸಿ ದುರುಪಯೋಗಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಅಧಿಕಾರಿಗಳ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಹಾಗಾಗಿ ಅವರೆಲ್ಲರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆಯಾಗಬೇಕು. ಈ ಎಲ್ಲಾ ಘಟನೆಗಳು ಸಂಸದೆಯ ಗಮನಕ್ಕೆ ಬಂದಿರುತ್ತದೆ. ಆದರೂ ಅವರು ಸುಮ್ಮನೆ ಕುಳಿತಿದ್ದಾರೆ, ಹೀಗಾಗಿ ಅವರ ವಿರುದ್ಧ ಕೂಡ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.










