ವಾಷಿಂಗ್ಟನ್: ಜ್ಯೋತಿಷ್ಯವನ್ನು ನಂಬಬೇಕು ಆದರೆ ಪ್ರಾಣ ಕಳೆದುಕೊಳ್ಳುವ ಮಟ್ಟಿಗಲ್ಲ, ಆದರೆ ಮಹಿಳೆಯೊಬ್ಬಳು ಸೂರ್ಯಗ್ರಹಣಕ್ಕೆ ಹೆದರಿ ಸಂಗಾತಿ ಹಾಗೂ ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದಿದೆ.
ಡೇನಿಯಲ್ ಜಾನ್ಸನ್ ಎನ್ನುವ ಮಹಿಳೆ ಲಾಸ್ ಏಂಜಲೀಸ್ನಲ್ಲಿ ವಾಸವಿದ್ದಳು. ಕ್ಯಾಲಿಫೋರ್ನಿಯಾದಲ್ಲಿ ಗ್ರಹಣ ಸಂಭವಿಸುವ ಗಂಟೆಗಳ ಮೊದಲು ಆಕೆ ತನ್ನಿಬ್ಬರು ಪ್ರೀತಿಪಾತ್ರರನ್ನು ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ಸಾವಿಗೆ ಶರಣಾಗಿದ್ದಾಳೆ.
ಗ್ರಹಣವು ಯಾವ ರೀತಿ ಅಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ಆಕೆ ಟಿವಿಯಲ್ಲಿ ನೋಡಿದ್ದಾಳೆ. ಬಳಿಕ ಆಕೆ ತನ್ನ ಸಂಗಾತಿಯನ್ನ ಇರಿದು ಕೊಂದು, ಚಲಿಸುತ್ತಿದ್ದ ಕಾರಿನಿಂದ ಹೊರಕ್ಕೆ ತಳ್ಳಿ ಮಕ್ಕಳನ್ನ ಕೊಂದಿದ್ದಾಳೆ. ನಂತರ ದೊಡ್ಡದೊಂದು ಮರಕ್ಕೆ ಕಾರನ್ನು ಗುದ್ದಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ತನ್ನ ವೆಬ್ಸೈಟ್ಸ್ನಲ್ಲಿ ಅಂದು ರಾಶಿ-ಭವಿಷ್ಯ ಪ್ರಕಟಿಸಿ, ವಾಚನಗೋಷ್ಠಿಯನ್ನೂ ನೀಡಿದ್ದ ಡೇನಿಯಲ್ ಜಾನ್ಸನ್, ಈ ಬಾರಿಯ ಸಂಪೂರ್ಣ ಸೂರ್ಯಗ್ರಹಣವು ಆಧ್ಯಾತ್ಮಿಕ ಯುದ್ಧದ ಸಾರಾಂಶವಾಗಿದೆ ಎಂದು ಅನುಯಾಯಿಗಳಿಗೆ ಹೇಳಿದ್ದಳು. ಅಲ್ಲದೇ ನಿಮ್ಮ ರಕ್ಷಣೆಗೆ ಅಗತ್ಯ ಕ್ರಮ ವಹಿಸಿ, ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ. ಪ್ರಪಂಚವು ಇದೀಗ ಬಹಳ ಸ್ಪಷ್ಟವಾಗಿ ಬದಲಾಗುತ್ತಿದೆ. ನೀವು ಯಾವುದಾದರೂ ಒಂದು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ, ನಿಮ್ಮ ಜೀವನದಲ್ಲಿ ಸರಿಯಾದ ಆಯ್ಕೆ ಮಾಡಿಕೊಳ್ಳುವ ಕಾಲ ಈಗ ಬಂದಿದೆ ಎಂದು ಸಹ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಳು.
ಆಕೆಯ ಒಂದು ಮಗುವಿಗೆ 8 ತಿಂಗಳು ವಯಸ್ಸಾಗಿದ್ದರೆ, ಮತ್ತೊಂದು ಮಗುವಿಗೆ 9 ವರ್ಷ ವಯಸ್ಸು, ಆಕೆಯ ಪತಿ ಅಮೆರಿಕದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










