ಉಡುಪಿ : ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್ 1 ರಿಂದ 9ನೇ ತರಗತಿ ಯಿಂದ ದ್ವಿತೀಯ ಪಿಯು ವರೆಗೆ ಶಾಲಾರಂಭ ಮಾಡಲು ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದರು.
ಜಿಲ್ಲೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿದ ಕಾರಣಕ್ಕೆ ತರಗತಿಗಳು ಆರಂಭವಾಗಿರಲಿಲ್ಲ. ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಶೇ. 1.4 ಇದ್ದು ಈ ಹಿನ್ನೆಲೆಯಲ್ಲಿ 9ನೇ ತರಗತಿ ಯಿಂದ ದ್ವಿತೀಯ ಪಿಯು ವರೆಗೆ ಶಾಲಾರಂಭ ಮಾಡುತ್ತೇವೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲು ಸೂಚಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಎಚ್ಚರಿಕೆಯಿಂದ ಗಮನಿಸಬೇಕು ಅಲ್ಲದೆ ಶಿಕ್ಷಕರಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಂಡ ಬಳಿಕ ವಷ್ಟೇ ಬೋಧನೆಗೆ ಅವಕಾಶ ನೀಡಬೇಕು. ಕೋವಿಡ್ ನಿಯಮಾವಳಿ ಅರ್ಥೈಸಿಕೊಂಡು ತರಗತಿ ಆರಂಭಿಸಬೇಕು ಎಂದು ಅವರು ಹೇಳಿದರು.










