ಸೈಬರ್ ಕ್ರೈಮ್ ಆರೋಪಿಯನ್ನು ಬಂಧಿಸಲು ತೆರಳಿದ್ದ ಬೆಂಗಳೂರು ಪೊಲೀಸರು- ಲಂಚಕ್ಕೆ ಬೇಡಿಕೆಯೊಡ್ಡಿ ಕೇರಳ ಪೊಲೀಸರ ವಶಕ್ಕೆ…

69
firstsuddi

ಬೆಂಗಳೂರು: ಬೆಂಗಳೂರಿನ ಸಾಫ್ಟ್​ವೇರ್ ಉದ್ಯಮಿಗೆ 26 ಲಕ್ಷ ರೂ. ವಂಚನೆ ಮಾಡಿದ್ದ ಸೈಬರ್ ಕ್ರೈಮ್ ಅಪರಾಧಿಯನ್ನು ಬಂಧಿಸಲು ತೆರಳಿದ್ದ ಬೆಂಗಳೂರು ಪೊಲೀಸರು, ಕಳ್ಳನ ಬಳಿಯೇ ಲಂಚಕ್ಕೆ ಬೇಡಿಕೆಯೊಡ್ಡಿ ಕೇರಳ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತರು ಬೆಂಗಳೂರು ವೈಟ್ ಫೀಲ್ಡ್ ಸೆನ್ ಪೊಲೀಸರಾಗಿದ್ದಾರೆ. ಇವರನ್ನು ಕೊಚ್ಚಿಯ ಕಲಂಚೇರಿ ಪೊಲೀಸರು ಬಂಧಿಸಿದ್ದಾರೆ. ಆನ್​ಲೈನ್ ವಂಚನೆ ಕೇಸ್ ರಿಕವರಿಗೆ ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ಹೇಳಿ ಸಾಫ್ಟ್​ವೇರ್ ಇಂಜಿನಿಯರ್ ಬಳಿ ಬರೊಬ್ಬರಿ ಆನ್​ಲೈನ್ ಮೂಲಕ 26 ಲಕ್ಷ ರೂ. ಹಣವನ್ನು ಪಡೆದು ದುಷ್ಕರ್ಮಿಗಳು ವಂಚನೆ ಮಾಡಿದ್ದರು. ಈ ಹಿನ್ನಲೆ ಚಂದಕ್ ಶ್ರೀಕಾಂತ್ ಎಂಬುವವರು ವೈಟ್ ಫೀಲ್ಡ್ ಸೈಬರ್ ಠಾಣೆಗೆ ದೂರು ಕೊಟ್ಟಿದ್ದರು. ಈ ಪ್ರಕರಣ ತನಿಖೆಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ನಡೆಸುತ್ತಿದ್ದರು. ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್‌ನಲ್ಲಿ 2 ಕೋಟಿ ವರ್ಗಾವಣೆಯಾಗಿರುವುದು ಪತ್ತೆಯಾಯಿತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಮತ್ತು ತಂಡ ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ಹೊರಟಿತ್ತು.

ನೌಶಾದ್ ಎಂಬವನಿಂದ ಆನ್​ಲೈನ್ ಫ್ರಾಡ್ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಈ ಹಿನ್ನಲೆ ಅರೆಸ್ಟ್ ಮಾಡಲು ತೆರಳಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು, ಬಂಧಿಸದೇ ಇರಲು 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಇನ್ನು ಈ ಕುರಿತು ಆರೋಪಿ ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಬಳಿಕ ಬೆಂಗಳೂರು ಪೊಲೀಸರು ನಾವು ಪ್ರಕರಣವೊಂದರ ತನಿಖೆಗೆ ಬಂದಿರುವುದಾಗಿ ತಿಳಿಸಿದ್ದರು. ಆದರೂ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಲಾಗಿದೆ.