ಸೋಲಿಗೆ ಎದೆಗುಂದಬೇಡಿ, ದುರ್ಮಾರ್ಗಗಳ ಬಳಸಿ ಚುನಾವಣೆ ಗೆಲ್ಲುವುದು ಕಾಂಗ್ರೆಸ್ಸಿಗೆ ಹೊಸತೇನೂ ಅಲ್ಲ: ವಿಜಯೇಂದ್ರ.

30

ಬೆಂಗಳೂರು: ಸೋಲಿಗೆ ಎದೆಗುಂದಬೇಡಿ. ದುರ್ಮಾರ್ಗಗಳನ್ನು ಬಳಸಿ ಉಪಚುನಾವಣೆಯನ್ನು ಗೆಲ್ಲುವುದು ಆಡಳಿತ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಹೊಸತೇನೂ ಅಲ್ಲ. ಈ ನಿಟ್ಟಿನಲ್ಲಿ ಈ ಚುನಾವಣೆಯ ಅಪಜಯವನ್ನು ನಾವ್ಯಾರೂ ಹಿನ್ನಡೆ ಎಂದು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಉಪ ಚುನಾವಣೆ ಫಲಿತಾಂಶಗಳು ಪಕ್ಷ ಸಂಘಟನೆಯ ಸಾಮರ್ಥ್ಯ ಹಾಗೂ ಪ್ರಭಾವವನ್ನು ಬಿಂಬಿಸುವ ಅಳತೆಗೋಲಾಗಿರುವುದಿಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನು ಆಧರಿಸಿ ಈ ಚುನಾವಣಾ ಫಲಿತಾಂಶಗಳು ಹೊರಹೊಮ್ಮುತ್ತವೆ. ಸದ್ಯ ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಎರಡು ಕ್ಷೇತ್ರಗಳಲ್ಲಿ, ಮಿತ್ರ ಪಕ್ಷ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಪರಾಜಯಗೊಂಡಿರುವ ಕಾರಣದಿಂದ ನಾವ್ಯಾರೂ ಎದೆಗುಂದಬೇಕಿಲ್ಲ. ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್‍ನ ಅಧಿಕಾರ ದುರುಪಯೋಗ ಹಾಗೂ ಆಮಿಷಗಳು ಮತದಾರರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಪರಿಣಾಮ ಬೀರಿದೆ ಎಂಬುದು ನಿಸ್ಸಂಶಯ, ಆದರೂ ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ, ಈ ಫಲಿತಾಂಶ ಭವಿಷ್ಯತ್ತಿನಲ್ಲಿ ನಮಗೆ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೂ ಆಗಿದೆ ಎಂದು ಭಾವಿಸೋಣ. ಭಾರತೀಯ ಜನತಾ ಪಾರ್ಟಿ ಅಧಿಕಾರದ ಬೆನ್ನು ಹತ್ತಿ ರಾಜಕಾರಣ ಮಾಡುವುದಕ್ಕಾಗಿ ಜನ್ಮತಾಳಿದ್ದಲ್ಲ. ಉದಾತ್ತ ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಯೋಜಿತವಾಗಿ ಬೆಳೆದು ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷ, ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಯ ಪ್ರತಿ ಹಂತವೂ ಚಾರಿತ್ರಿಕ ದಾಖಲೆಗಳಾಗಿವೆ. ಪಕ್ಷದ ಕಾರ್ಯಕರ್ತರಾಗಿ ನಾವೆಲ್ಲರೂ ಹೆಮ್ಮೆಪಡುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಹೆಬ್ಬಾಗಿಲು ತೆರೆದು ಕೊಟ್ಟ ರಾಜ್ಯ ‘ಕರ್ನಾಟಕ’ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದೊಂದಿಗೆ ಹತ್ತು ಹಲವು ಹಗರಣಗಳಲ್ಲಿ ಸಿಲುಕಿಕೊಂಡು ರಾಜ್ಯದ ಗೌರವ ಹಾಗೂ ಘನತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕುಗ್ಗುವಂತಾಗಲು ಕಾರಣವಾಗಿದೆ. ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬ್ಯಾಂಕಿನ ಖಾತೆಗೆ ಖನ್ನ ಹಾಕಿ ಲಪಟಾಯಿಸಿದ ಪ್ರಕರಣವೂ ದೇಶದ ಇತಿಹಾಸದಲ್ಲಿಯೇ ಮೊದಲು. ವಕ್ಫ್ ಕಾಯ್ದೆ ಹೆಸರಿನಲ್ಲಿ ರೈತರು, ಮಠಮಾನ್ಯಗಳು ಹಾಗೂ ದೇವಸ್ಥಾನಗಳ ಆಸ್ತಿ ಆಕ್ರಮಿಸಲು ಕಠೋರ ನಿಲುವಿನ ಅಸ್ತ್ರ ಬಳಸಿದ್ದು ಇದೇ ಮೊದಲು.