ಸ್ನೇಹಿತನ ಜೊತೆ ಚಾರಣಕ್ಕೆ ಬಂದಿದ್ದ ಯುವಕ ನಾಪತ್ತೆ ಪ್ರಕರಣ: 4 ದಿನಗಳ ಬಳಿಕ ಶವವಾಗಿ ಪತ್ತೆ…

52
firstsuddi

ರಾಮನಗರ: ಸ್ನೇಹಿತರ ಜೊತೆ ಚಾರಣಕ್ಕೆ ಬಂದು ದಾರಿ ತಪ್ಪಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗಗನ್ ದೀಪಕ್ ಸಿಂಗ್ ಮೃತ ದುರ್ದೈವಿ. ಉತ್ತರಪ್ರದೇಶ ಮೂಲದ ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಲೆಸಿದ್ದ. ಚಾರಣದ ವೇಳೆ ಕಾಲುಜಾರಿ ಕಂದಕಕ್ಕೆ ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.

ಕಳೆದ ಭಾನುವಾರ ಗಗನ್ ದೀಪಕ್ ಸಿಂಗ್, ಸ್ನೇಹಿತನ ಜೊತೆ ಮಾಗಡಿ ತಾಲೂಕಿನ ಸಾವನದುರ್ಗ ಏಕಶಿಲಾ ಬೆಟ್ಟಕ್ಕೆ ಚಾರಣ ಬಂದಿದ್ದ. ಈ ವೇಳೆ ಅರಣ್ಯ ಪ್ರದೇಶದಲ್ಲಿ ದಾರಿ ತಪ್ಪಿದ ಗಗನ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ಕೂಡಾ ಸ್ವಿಚ್ಆಫ್ ಆಗಿತ್ತು.

ಬಳಿಕ ಗಗನ್ ಸ್ನೇಹಿತ ಈ ಸಂಬಂಧ ಮಾಗಡಿ ಪೊಲೀಸರ ಸಹಾಯ ಕೋರಿದ್ದರು. ಈ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ನಿರಂತರ ಹುಡುಕಾಟ ನಡೆಸಿದ್ದ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ, ಥರ್ಮಲ್ ಡ್ರೋನ್, ಶ್ವಾನದಳ ಸೇರಿ ಎಸ್‌ಡಿಆರ್‌ಎಫ್ ತಂಡದಿಂದಲೂ ಶೋಧ ನಡೆಸಿ ಸತತ 100 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ಗಗನ್ ದೀಪಕ್ ಸಿಂಗ್ ಶವ ಪತ್ತೆಯಾಗಿದೆ.

ಸದ್ಯ ಮೃತದೇಹವನ್ನು ಹೊರಗೆ ತೆಗೆದಿರುವ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.