ಸ್ಪ್ರಿಂಟರ್ ಕ್ವೀನ್ ಹಿಮಾ ದಾಸ್ ಅವರಿಗೆ ಡಿಎಸ್ಪಿ ಹುದ್ದೆ: ಅಸ್ಸೋಂ ಸರ್ಕಾರದ ಮಹತ್ವದ ನಿರ್ಧಾರ…

116
First Suddi

ಗುವಾಹಟಿ (ಅಸ್ಸೋಂ): ಸ್ಪ್ರಿಂಟರ್ ಕ್ವೀನ್ ಹಿಮಾ ದಾಸ್ ಅವರನ್ನು ರಾಜ್ಯದ ಡಿಎಸ್ಪಿ ಯಾಗಿ ನೇಮಕ ಮಾಡಲು ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಂದು ಮತ್ತು ಎರಡನೇ ಶ್ರೇಣಿಯ ಅಧಿಕಾರಿಗಳಾಗಿ ಕ್ರೀಡಾಪಟುಗಳನ್ನು ನೇಮಕ ಮಾಡಲು ರಾಜ್ಯದ ಸಮಗ್ರ ಕ್ರೀಡಾ ನೀತಿಯನ್ನು ಸಂಪುಟ ತಿದ್ದುಪಡಿ ಮಾಡಿದೆ. ಒಲಿಂಪಿಕ್ಸ್, ವಿಶ್ವ ಚಾಂಪಿಯನ್ಶಿಪ್, ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ವಿವಿಧ ಹುದ್ದೆಗಳನ್ನು ನೀಡಲಾಗುತ್ತಿದ್ದು, ಇದೀಗ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅವರನ್ನು ಡಿಎಸ್ಪಿ ಯಾಗಿ ನೇಮಕ ಮಾಡಲು ಸಂಪುಟ ಸಚಿವರು ನಿರ್ಧರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಹಿಮಾ ದಾಸ್ ಅವರಿಗೆ ಡಿಎಸ್ಪಿ ಹುದ್ದೆ ನೀಡುವ ಸಂಪುಟದ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಅಸ್ಸೋಂನ ಧಿಂಗ್ ಗ್ರಾಮದ ಹಿಮಾ, ಅವರು ಐಎಎಎಫ್ ವರ್ಲ್ಡ್ ಅಂಡರ್ 20 ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದು, ಜಾಗತಿಕ ಮಟ್ಟದ ಓಟದ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಯೂ ಇದೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸತತವಾಗಿ ಐದು ಚಿನ್ನದ ಪದಕ ಮುಡಿಗೇರಿಸಿಕೊಂಡಿರುವ ಸಾಧನೆ ಕೂಡ ಇವರದ್ದಾಗಿದೆ. 2018ರಲ್ಲಿ ಹಿಮಾದಾಸ್ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.