ಸ್ವಂತ ಮಗುವನ್ನೇ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ಶವವಿಟ್ಟುಕೊಂಡು ತೆರಳುತ್ತಿದ್ದ ಮಹಿಳೆಯ ಬಂಧನ…

47
firstsuddi

ಚಿತ್ರದುರ್ಗ: ಸ್ವಂತ ಮಗುವನ್ನೇ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ಶವವಿಟ್ಟುಕೊಂಡು ತೆರಳುತ್ತಿದ್ದ ಮಹಿಳೆಯನ್ನು ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ಟಾರ್ಟ್ಅಪ್ ಫೌಂಡರ್ ಮತ್ತು ಸಿಇಓ ಸುಚನಾ ಸೇಠ್ ವಿರುದ್ಧ ಗೋವಾದ ಹೋಟೆಲ್‌ನಲ್ಲಿ ಮಗುವನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಚನಾ ಸೇಠ್ ಅವರು ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದರು. ಸೋಮವಾರ ಹೋಟೆಲ್ ತೊರೆಯುವಾಗ ಒಬ್ಬಂಟಿಯಾಗಿದ್ದರು. ತಾನು ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಯನ್ನ ಕೇಳಿದ್ದಾಳೆ. ಅವರು ವಿಮಾನ ಸೌಲಭ್ಯ ಇರುವ ಸಲಹೆ ನೀಡಿದರೂ ಟ್ಯಾಕ್ಸಿ ತೆಗೆದುಕೊಳ್ಳುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಆಕೆ ಹೋಟೆಲ್‌ನಿಂದ ಹೊರಗೆ ಹೋದ ಬಳಿಕ ಮಗು ಇಲ್ಲದಿದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ. ಅಲ್ಲದೇ ಆಕೆ ತಂಗಿದ್ದ ಹೋಟೆಲ್ ಶುಚಿಗೊಳಿಸಲು ಹೋದಾಗ ರಕ್ತದ ಕಲೆಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಹಿಳೆ ತೆರಳುತ್ತಿದ್ದ ಕಾರಿನ ಚಾಲಕನನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕೊಂಕಣಿಯಲ್ಲಿ ಮಾತನಾಡಿದ ಪೊಲೀಸರು, ಘಟನೆ ಬಗ್ಗೆ ಚಾಲಕನಿಗೆ ವಿವರಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಡಲು ಸೂಚನೆ ನೀಡಿದ್ದಾರೆ.

ಚಾಲಕನಿಗೆ ಈ ಮಾಹಿತಿ ತಿಳಿದಾಗ ಕಾರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಿತ್ರದುರ್ಗದಿಂದ ಹಿರಿಯೂರು ಕಡೆಗೆ ಸಾಗುತ್ತಿತ್ತು. ಐಮಂಗಲ ಸಮೀಪದ ಪೊಲೀಸ್ ಠಾಣೆ ಗಮನಿಸಿದ ಚಾಲಕ, ನೇರವಾಗಿ ಠಾಣೆಗೆ ಕಾರು ತಂದಿದ್ದಾರೆ. ಕಾರಿನ ಡಿಕ್ಕಿ ತೆರೆದಾಗ ಸೂಟ್ ಕೇಸ್ ಬ್ಯಾಗಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಹಿಳೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.