ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹರ್ಯಾಣದಲ್ಲಿ ರಾಜಕೀಯ ಗೊಂದಲದ ನಡುವೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಇಂದು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಬೆಳವಣೆಗೆ ಬೆನ್ನಲ್ಲೇ ನಯಾಬ್ ಸೈನಿ ಅಥವಾ ಸಂಜಯ್ ಭಾಟಿಯಾ ಅವರು ಸಿಎಂ ಸ್ಥಾನಕ್ಕೇರಬಹುದು ಎನ್ನಲಾಗುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಲ್ನಿಂದ ಖಟ್ಟರ್ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ.
ಪಕ್ಷದ ಹಿರಿಯ ನಾಯಕರು ಮೌನ ವಹಿಸಿರುವುದರಿಂದ ಬದಲಾವಣೆಯ ಸ್ವರೂಪ ಸ್ಪಷ್ಟವಾಗಿಲ್ಲ. ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ವಿಫಲವಾದ ನಂತರ ಬಿಜೆಪಿ ಮತ್ತು ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ನಡುವಿನ ಸಂಬಂಧ ಹದಗೆಟ್ಟಿದೆ. 2019 ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲಾ 10 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು.
ಮೈತ್ರಿ ಮುರಿದು ಬಿದ್ದಿದೆ ಆದರೆ ಎಂಎಲ್ ಖಟ್ಟರ್ ಸರ್ಕಾರವನ್ನು ಬೆಂಬಲಿಸುವ ಕೆಲವು ಸ್ವತಂತ್ರ ಶಾಸಕರು ಅದರ ಅಸ್ತಿತ್ವವನ್ನು ಖಚಿತಪಡಿಸುತ್ತಾರೆ ಎಂದು ಸ್ವತಂತ್ರ ಶಾಸಕ ನಯನ್ ಪಾಲ್ ರಾವತ್ ಹೇಳಿದ್ದಾರೆ ಎಂದು ವರದಿಯಾಗಿದೆ.










