ಹಾಲಿನ ಡೈರಿ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ತೆಗೆದ ಗುಂಡಿಗೆ ಬಿದ್ದು ಬಾಲಕ ಸಾವು.

24

ಬೆಂಗಳೂರು: ಕನ್ನಮಂಗಲ ಗ್ರಾಮ ಪಂಚಾಯತ್ ಮುಂಭಾಗದ ಹಾಲಿನ ಡೈರಿ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ಈ ಹಾಲಿನ ಡೈರಿ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ತೆರೆದಿದ್ದ ಗುಂಡಿಗೆ ಬಿದ್ದು ಐದು ವರ್ಷದ ಬಾಲಕ ಮೃತಪಟ್ಟಿರುವ ದುರಂತ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲೀಕ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದ ಸುನಿಲ್ ಎಂಬಾತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಐದು ವರ್ಷದ ಬಾಲಕ ತನ್ನ ಸ್ನೇಹಿತರ ಜೊತೆ ಆಟವಾಡುವಾಗ ಅಕಸ್ಮಿಕವಾಗಿ ತೆರೆದ ಗುಂಡಿಗೆ ಬಿದ್ದಿದ್ದಾನೆ. ಲಿಫ್ಟ್ ಗೆಂದು ತೆಗೆದಿದ್ದ ಗುಂಡಿ ಐದು ಅಡಿ ಆಳವಿದ್ದು ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ತೆರೆದ ಗುಂಡಿಗೆ ನೀರು ತುಂಬಿಕೊಂಡಿದ್ದರಿಂದ ನೀರಿನಲ್ಲಿ ಬಾಲಕ ಮುಳುಗಿದ್ದಾನೆ ಅಲ್ಲೇ ಇದ್ದ ಸ್ನೇಹಿತರು ತಕ್ಷಣವೇ ನೀಡಿದ ಮಾಹಿತಿ ಮೇರೆಗೆ ಸ್ಥಳೀಯರು, ಬಾಲಕನನ್ನ ರಕ್ಷಿಸಿ ಆಸ್ಪತ್ರೆ ಸೇರಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.