ನವದೆಹಲಿ: ರಾಜ್ಯದ ನೀರಾವರಿ ವಿಚಾರ ಸೇರಿದಂತೆ ಕೆಲವು ವಿಷಯಗಳ ಕುರಿತು ಚರ್ಚಿಸಲು ಇಂದು ಪ್ರಧಾನ ಮಂತ್ರಿ ಮೋದಿಯವರನ್ನು ಭೇಟಿ ಮಾಡಲಿದ್ದೇವೆ. ವನ್ಯಜೀವಿ ಇಲಾಖೆ ಸಚಿವರನ್ನು ಮತ್ತು ಮಂಡಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಈಗಾಗಲೇ ಭೇಟಿ ಮಾಡಿದ್ದೇವೆ. ವನ್ಯಜೀವಿ ಮಂಡಳಿಗೆ ಪ್ರಧಾನಿಯವರೇ ಅಧ್ಯಕ್ಷರಾಗಿದ್ದಾರೆ. ಸ್ಥಾಯಿ ಸಮಿತಿಗೆ ಸಚಿವರು ಅಧ್ಯಕ್ಷರಾಗಿದ್ದಾರೆ ಎಂದರು. ಕಳಸಾ ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯವಿರುವ ಅರಣ್ಯ ಮತ್ತು ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಲಿದ್ದು, ಅದಕ್ಕೆ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಡಿ ಕೆ ಶಿವಕುಮಾರ್, ಹಾಸನ ಸಮಾವೇಶ ವಿರುದ್ಧ ಎಐಸಿಸಿ ನಾಯಕರಿಗೆ ಪತ್ರ ಬಂದಿದ್ದು, ಅದು ಪಕ್ಷದ ಸಮಾವೇಶ ಬದಲು ಏಕವ್ಯಕ್ತಿ ಸಿದ್ದರಾಮಯ್ಯ ಪರ ಸಮಾವೇಶವಾಗುತ್ತಿದೆ ಎಂದು ವದಂತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು. ಪತ್ರ ಬಂದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ ಮುಖ್ಯಮಂತ್ರಿಗಳು ನನಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಕ್ಕಿಂತ ಹೆಚ್ಚು ನನಗೆ ಗೊತ್ತಿಲ್ಲ. ಪಕ್ಷದ ಉಪಸ್ಥಿತಿ ಇದ್ದೇ ಇರುತ್ತದೆ ಎಂದರು.