ಅಸ್ಸಾಂ : ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಸಲಹೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಭಾರತ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಅಜ್ಮಲ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಪುರುಷರು 20ರಿಂದ 22 ವರ್ಷಕ್ಕೆ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಆದರೆ, ಹಿಂದೂಗಳು ಮದುವೆಗೆ ಮುನ್ನ ಒಬ್ಬೊಬ್ಬರು ಎರಡು ಅಥವಾ ಮೂರು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳಿಗೆ ಜನ್ಮ ನೀಡುವುದಿಲ್ಲ. ಆ ಮಹಿಳೆಯರೊಂದಿಗೆ ಎಂಜಾಯ್ ಮಾಡಿ ಆಮೇಲೆ ಬೇರೆ ಮದುವೆಯಾಗುತ್ತಾರೆ. ಇದರಿಂದ ಅವರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದರು.
40 ವರ್ಷ ವಯಸ್ಸಿನ ನಂತರ ಹಿಂದೂಗಳು ಪೋಷಕರ ಒತ್ತಡಕ್ಕೆ ಮದುವೆಯಾಗುತ್ತಾರೆ. ಆದ್ದರಿಂದ, ಅವರು 40ರ ನಂತರ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹೇಗೆ ನಿರೀಕ್ಷಿಸಬಹುದು? ಫಲವತ್ತಾದ ಭೂಮಿಯಲ್ಲಿ ಬಿತ್ತನೆ ಮಾಡಿದರೆ ಮಾತ್ರ ಉತ್ತಮ ಫಸಲು ಸಿಗುತ್ತದೆ. ಆದ್ದರಿಂದ ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಮಕ್ಕಳಿಗೆ 20-22ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು. 18-20 ವರ್ಷಕ್ಕೆ ಹುಡುಗಿಯರ ಮದುವೆಯಾಗಬೇಕು ಎಂದು ಕರೆ ನೀಡಿದ್ದಾರೆ.