ಹಿಂದೂಗಳ ಹೆಸರೇಳಿ ಈ ಹಿಂದೆಯೂ ಉಗ್ರ ಕೃತ್ಯ ನಡೆದಿದೆ : ಸಿ.ಟಿ.ರವಿ

44
firstsuddi

ನವದೆಹಲಿ : ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂಗಳ ಹೆಸರೇಳಿ ಉಗ್ರ ಕೃತ್ಯ ಈ ಹಿಂದೆಯೂ ನಡೆದಿದೆ. ಮಂಗಳೂರಿನ ಸ್ಫೋಟ ಪ್ರಕರಣ ಲಘುವಾಗಿ ಪರಿಗಣಿಸುವಂತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಿದ್ದೇನೆ. ಸ್ಫೋಟ ಪ್ರಕರಣ ಎನ್​ಐಎಗೆ ಕೊಡುವ ಬಗ್ಗೆ ಸಿಎಂ ಹೇಳಿದ್ದಾರೆ. ಇದೊಂದು ಜಿಹಾದಿ ಕೃತ್ಯವಾಗಿದೆ. ಕೊಯಮತ್ತೂರು ಮತ್ತು ಮಂಗಳೂರು ಸ್ಫೋಟಕ್ಕೆ ಲಿಂಕ್ ಇದೆ. ಕಾನೂನು ನೆರವು ನೀಡುವವರನ್ನು ಸಹ ವಿಚಾರಣೆ ನಡೆಸಬೇಕು ಎಂದರು.

ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಪದೇಪದೇ ಕ್ಯಾತೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಏನು ಉತ್ತರ ಕೊಡಬೇಕೋ ಅದನ್ನು ಸಿಎಂ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಮರಾಠಿಗರು ಸುರಕ್ಷಿತವಾಗಿದ್ದಾರೆ. ವಿವಾದದ ನಡುವೆಯೂ ಮಹಾರಾಷ್ಟ್ರದಲ್ಲಿ ನಮ್ಮ ಕನ್ನಡಿಗರು ಕೂಡ ಸೇಫ್ ಆಗಿದ್ದಾರೆ. ನಾವು ಪಿಒಕೆಗೆ ಮೊದಲ ಪ್ರಾಮುಖ್ಯತೆ ಕೊಡುತ್ತೇವೆ. ಅದನ್ನ ಹೇಗೆ ವಾಪಸ್ ತಗೋಬೇಕು ಅನ್ನೋದು ನಮ್ಮ ಆದ್ಯತೆ. ಪಿಒಕೆ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತವಾಗಿಲ್ಲ. ಹಾಗಾಗಿ ನಾವು ಹೆಚ್ಚು ಪಿಒಕೆಗೆ ಆದ್ಯತೆ ನೀಡುತ್ತೇವೆ ಎಂದರು.

ಇದೇ ವೇಳೆ ಮತದಾರರ ಮಾಹಿತಿಗೆ ಕನ್ನ ವಿಚಾರದ ಕುರಿತು ಪ್ರತಿಕ್ರಿಯಿಸಿ, ಚಿಲುಮೆಗೆ ಅವಕಾಶ ನೀಡಿದ್ದೆ ಸಿದ್ದರಾಮಯ್ಯ ಸರ್ಕಾರ ಎನ್ನುವ ಆರೋಪ ಇದೆ. ಈ ಬಗ್ಗೆ ತನಿಖೆಯಾಗಲಿ ಬಿಡಿ. ಆಯೋಗ ಜನರಿಗೂ ಮತದಾರರ ಪಟ್ಟಿ ಅಪ್ಡೇಟ್ ಮಾಡಲು ಅನುಮತಿ ನೀಡಿದೆ. ಸಂಘ ಸಂಸ್ಥೆಗಳಿಗೂ ಈ ಅನುಮತಿ ನೀಡಿದೆ. ಕರಡು ಪಟ್ಟಿಯಲ್ಲಿ ನಿರ್ದಿಷ್ಟವಾಗಿ ಹೆಸರು ತಪ್ಪಿದ್ರೆ ದೂರು ನೀಡಬಹುದು. ಬಿಎಲ್ ಓ ಇದಕ್ಕೆ ಉತ್ತರದಾಯಿ. ಬಿಎಲ್ ಓಗೆ ಅಂತಿಮ ಪಟ್ಟಿ ಪರಿಷ್ಕರಣೆ ಮಾಡುವ ಅಧಿಕಾರ ಇದೆ ಎಂದರು.