ಚಿಕ್ಕಮಗಳೂರಿನ ಹಿಟ್ & ರನ್ ಕೇಸ್ ಬಗ್ಗೆ ಚಂದ್ರಪ್ರಭಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದೆ, ಕುಡಿದು ಬೈಕ್ ಸವಾರನೇ ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ‘ಇಲ್ಲಿ ನನ್ನ ತಪ್ಪಿಲ್ಲ. ನಾನು ಅವರನ್ನು ಚಿಕ್ಕಮಗಳೂರು ಆಸ್ಪತ್ರೆಗೆ ಸೇರಿಸಿದ ಬಳಿಕವೇ ತೆರಳಿದ್ದೇನೆ. ನಾನೇ ಕಾರು ಚಲಾಯಿಸುತ್ತಿದ್ದೆ ಎನ್ನುವ ವಿಚಾರವನ್ನು ಪೊಲೀಸರಿಗೂ ಹೇಳಿದ್ದೆ. ಅವರಿಗೆ ತಿಳಿಸಿ ನಂತರ ಹೊರಟಿದ್ದೆ. ಬೈಕ್ ಸವಾರನಿಗೆ ಗುದ್ದಿ ಹಾಗೆಯೇ ಹೋಗಿದ್ದೇನೆ ಎನ್ನುವ ಆರೋಪ ಸುಳ್ಳು’ ಎಂದು ನಟ ಚಂದ್ರಪ್ರಭಾ ಸ್ಪಷ್ಟನೆ ನೀಡಿದ್ದಾರೆ.
‘ಗಿಚ್ಚಿ ಗಿಲಿ ಗಿಲಿ’ ವಿನ್ನರ್ ಚಂದ್ರಪ್ರಭಾ ಅವರು ಹಿಟ್ & ರನ್ ಕೇಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಚಿಕ್ಕಮಗಳೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಚಿಕ್ಕಮಗಳೂರು ಸಮೀಪದ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬುವವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಕಾರು ಚಂದ್ರಪ್ರಭಾ ಅವರಿಗೆ ಸೇರಿದ್ದಾಗಿದೆ. ಡಿಕ್ಕಿ ಹೊಡೆದ ನಂತರ ಮಾಲ್ತೇಶ್‌ಗೆ ಏನಾಯಿತು ಎಂದು ನೋಡುವ ಸೌಜನ್ಯ ಕೂಡ ತೋರಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮಾಲ್ತೇಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










