ಒಂದು ವಾರದ ಯುರೋಪ್ ಪ್ರವಾಸ ಕೈಗೊಂಡ ರಾಹುಲ್ ಗಾಂಧಿ.

62
firstsuddi

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದಿನಿಂದ ಒಂದು ವಾರದ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ರಾತ್ರಿಯೇ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಸೆಪ್ಟೆಂಬರ್ 7ರಂದು ಬ್ರಸೆಲ್ಸ್‌ನಲ್ಲಿ ಇಯು ವಕೀಲರನ್ನು ರಾಹುಲ್ ಗಾಂಧಿ ಭೇಟಿ ಮಾಡಲಿದ್ದು, ಹೇಗ್‌ನಲ್ಲಿಯೂ ಇದೇ ರೀತಿಯ ಸಭೆಯನ್ನು ನಡೆಸಲಿದ್ದಾರೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ 8ರಂದು ಪ್ಯಾರಿಸ್‌ನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸೆಪ್ಟೆಂಬರ್ 9ರಂದು ರಾಹುಲ್ ಗಾಂಧಿ ಪ್ಯಾರಿಸ್‌ನಲ್ಲಿರುವ ಫ್ರಾನ್ಸ್‌ನ ಲೇಬರ್ ಯೂನಿಯನ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನಾರ್ವೆಗೆ ಭೇಟಿ ನೀಡಲಿರುವ ಅವರು, ಸೆಪ್ಟೆಂಬರ್ 10ರಂದು ಓಸ್ಲೋದಲ್ಲಿ ಡಯಾಸ್ಪೋರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ರಾಹುಲ್ ಗಾಂಧಿ ಈ ಸಭೆ ಮುಕ್ತಾಯಗೊಂಡ ಬಳಿಕ ಅಂದರೆ ಸೆಪ್ಟೆಂಬರ್ 11ರಂದು ಹಿಂದಿರುಗುವ ಸಾಧ್ಯತೆಯಿದೆ.

ಸೆಪ್ಟೆಂಬರ್ 9 ಮತ್ತು 10ರಂದು ನಡೆಯುವ ಜಿ20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ನವದೆಹಲಿ ಶೃಂಗಾರಗೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವ ನಾಯಕರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಭಾರತ ಜಿ20 ಗುಂಪಿನ ಪ್ರಸ್ತುತ ಅಧ್ಯಕ್ಷ ಸ್ಥಾನ ವಹಿಸಿದೆ. ಶೃಂಗಸಭೆಗೆ 30ಕ್ಕೂ ಅಧಿಕ ರಾಷ್ಟ್ರಗಳ ಮುಖ್ಯಸ್ಥರು, ಐರೋಪ್ಯ ಒಕ್ಕೂಟದ ಉನ್ನತ ಅಧಿಕಾರಿಗಳು, 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಇತರ ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ.