ನಾಯಿ ಕಚ್ಚಿದ್ದ ವಿಷಯ ಮುಚ್ಚಿಟ್ಟಿದ್ದ ಬಾಲಕ- ಒಂದೂವರೆ ತಿಂಗಳ ಬಳಿಕ ರೇಬಿಸ್‍ನಿಂದ ಸಾವು…

50
firstsuddi

ಗಾಜಿಯಾಬಾದ್: ಒಂದೂವರೆ ತಿಂಗಳ ಹಿಂದೆ ನಾಯಿ ಕಚ್ಚಿದ ವಿಷಯವನ್ನು ಪೋಷಕರಿಂದ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ರೇಬಿಸ್‍ನಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

8ನೇ ತರಗತಿಯ ವಿದ್ಯಾರ್ಥಿ ಶಹವಾಜ್‍ನನ್ನು ಆರೋಗ್ಯ ಹದಗೆಟ್ಟ ಪರಿಣಾಮ ಸೋಮವಾರ ಸಂಜೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಂತೆಯೇ ಅಲ್ಲಿ ಚಿಕಿತ್ಸೆ ಪಡೆದು ಬುಲಂದ್‌ಶಹರ್‌ನಿಂದ ಗಾಜಿಯಾಬಾದ್‍ಗೆ ಮರಳಿ ಕರೆತರುತ್ತಿದ್ದಾಗ ಮೃತಪಟ್ಟಿದ್ದಾನೆ.

ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್‍ಗೆ ಒಂದೂವರೆ ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿತ್ತು. ಆದರೆ ಈತ ಭಯದಿಂದ ಅದನ್ನು ಪೋಷಕರಿಂದ ಮುಚ್ಚಿಟ್ಟಿದ್ದನು. ಕ್ರಮೇಣವಾಗಿ ಶಹವಾಜ್ ಗಾಳಿ ಮತ್ತು ನೀರನ್ನು ಕಂಡರೆ ಭಯಪಡುತ್ತಿದ್ದ, ಸದಾ ಕತ್ತಲೆಯಲ್ಲಿಯೇ ಇರುತ್ತಿದ್ದ, ಆಗಾಗ ಭಯಗೊಂಡು ಗಲಾಟೆ ಮಾಡುತ್ತಿದ್ದ ಎಂದು ಆತನ ಪೋಷಕರು ಹೇಳಿದ್ದಾರೆ.
ಮಗನ ವರ್ತನೆಯಿಂದ ಬೇಸತ್ತ ಪೋಷಕರು ಏನಾಯ್ತು ಎಂದು ಕೇಳಿದ್ದಾರೆ. ಈ ವೇಳೆ ಆತ ತನಗೆ ತಿಂಗಳ ಹಿಂದೆ ಪಕ್ಕದ ಮನೆಯ ನಾಯಿ ಕಚ್ಚಿರುವ ವಿಚಾರವನ್ನು ತಿಳಿಸಿದ್ದಾನೆ.

ಕೂಡಲೇ ಶಹವಾಜ್‍ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನನ್ನು ವೈದ್ಯರು ದಾಖಲಿಸಿಕೊಳ್ಳದೆ ಔಷಧಿ ಕೊಟ್ಟು ಕಳುಹಿಸಿದ್ದಾರೆ. ಆ ಬಳಿಕ ಕಳೆದ ವಾರ ಆಯುರ್ವೇದಿಕ್ ಔಷಧಿಯ ಮೊರೆ ಹೋಗಿರುವುದಾಗಿ ಪೊಲೀಸರ ಬಳಿ ಪೋಷಕರು ತಿಳಿಸಿದ್ದಾರೆ.

ಶಹವಾಜ್ ಅವರ ಕುಟುಂಬವು ಘಟನೆಯ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದೆ ಮತ್ತು ಇಂತಹ ಘಟನೆಗಳು ನಡೆಯದಂತೆ ಆಡಳಿತ ಮತ್ತು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.